ಅವನ ರೂಪ, ಸಧ್ರಡ ಮೈಕಟ್ಟು, ಸ್ಟೈಲ್, ಸ್ಮೈಲ್, ಹೀರೋಯಿಸಂಗೆ ಮನಸೋತು, ಮೆಚ್ಚಿ ಅವನನ್ನು ಕೈ ಹಿಡಿದವಳು ಮದುವೆಯ ನಂತರ ಅವನ ಹಟಮಾರಿತನ, ಅಲೆಮಾರಿತನ, ದುಶ್ಚಟ, ರೌಡಿಸಂಗಳಿಗೆ ಬೇಸತ್ತು ವಿಚ್ಛೇದನೆಗೆ ಅರ್ಜಿ ಹಾಕಿದಳು.
ಊಟ ತಿಂಡಿ ಬಿಟ್ಟು, ನಿದ್ದೆಯಿಲ್ಲದೆ, ಕೋಣೆಯ ಮೂಲೆಯಲ್ಲಿ ಕುಳಿತು ಅವಳು ತನ್ನ ಪ್ರೇಮವನ್ನು ನಿರಾಕರಿಸಲು ಕಾರಣವೇನೆಂದು ತಿಳಿಯದೆ ಕೊರಗುತ್ತಿದ್ದವನಿಗೆ, ಅದೇ ಮನೆಯ ಇನ್ನೊಂದು ಕೋಣೆಯ ಮೂಲೆಯಲ್ಲಿ ಕುಳಿತು, ಇವನ ಈ ಅವಸ್ಥೆಗೆ ಕಾರಣ ತಿಳಿಯದೆ, ಊಟ ತಿಂಡಿ, ನಿದ್ದೆಯಿಲ್ಲದೆ ಸೊರಗುತ್ತಿದ್ದ ಅವನಮ್ಮನ ಕೊರಗು ಕಾಣಿಸಲೇ ಇಲ್ಲ.
ಠಣ್ಣೆಂದು ನಾಣ್ಯವೊಂದು ತಟ್ಟೆಗೆ ಬಂದು ಬೀಳಲು ಆ ಭಿಕ್ಷುಕ ಮತ್ತೊಮ್ಮೆ ಎಣಿಸಲಾರಂಭಿಸಿದ. ಒಂದು.. ಎರಡು.. ಒಂದು ರೂಪಾಯಿಯ ಒಟ್ಟು ಹತ್ತು ನಾಣ್ಯಗಳು! ಅಬ್ಬ.. ಇನ್ನೊಂದು ಐದು ರೂಪಾಯಿ ಸಿಕ್ಕರೆ ಜ್ವರದಿಂದ ಮಲಗಿರುವ ಮಗನಿಗೆ ಔಷಧಿ ತರಬಹುದು ಎನ್ನುವ ಯೋಚನೆಯೇ ಮಂದಹಾಸ ತರಿಸಿತು ಕೃಶ ಶರೀರದ ಆತನ ಕಪ್ಪು ತುಟಿಗಳಲ್ಲಿ. ಆಗಲೇ ಪಕ್ಕದಂಗಡಿಯಿಂದ ಬಂದ ಹತ್ತು ರೂಪಾಯಿಯಿಗೆ ದೊರೆಯುವ ತೊಟ್ಟೆ ಸಾರಾಯಿಯ ವಾಸನೆ ಅವನ ಮೂಗರಳಿಸಿದವು.
ಒಂದಷ್ಟು ಯೋಚಿಸಿದ ಆತ. ಹತ್ತು ರೂಪಾಯಿ ತಾನೇ, ಇನ್ನೊಂದು ಸಲ ಒಟ್ಟುಗೂಡಿಸಬಹುದೆಂದುಕೊಳ್ಳುತ್ತಾ ಪಂಚೆ ಸರಿಪಡಿಸಿಕೊಂಡು ಸೀದಾ ಸಾರಾಯಿ ಅಂಗಡಿಯತ್ತ ನಡೆದೇಬಿಟ್ಟ!
ಅವನೊಬ್ಬ ಆಗರ್ಭ ಶ್ರೀಮಂತ. ಎಣಿಸಲಾರದಷ್ಟು ಆಸ್ತಿ ಅಂತಸ್ತು, ಎಷ್ಟು ಕೊಟ್ಟರೂ ಮುಗಿಯದಷ್ಟು ಸಂಪತ್ತು. ನಗರದ ಎಷ್ಟೋ ಬ್ಯುಸಿನೆಸ್ಮೆನ್ಗಳಿಗೆ ಈತನೇ ಗಾಡ್-ಫಾದರ್. ಅದೆಷ್ಟೋ ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ಕೊಡುಗೈದಾನಿ. ನಿಯತಕಾಲಿಕವೊಂದರಲ್ಲಿ ತನ್ನನ್ನು ದಾನಶೂರ ಕರ್ಣನೆಂದು ಬಿಂಬಿಸಿದ ಅಂಕಣವೊಂದನ್ನು ಮಂದಸ್ಮಿತನಾಗಿ ಹೆಮ್ಮೆಯಿಂದ ಓದುತ್ತಿದ್ದಾಗಲೇ ಕರೆಗಂಟೆಯ ಸದ್ದಾಯಿತು. ಯಾರೆಂದು ನೋಡಿದರೆ ಹಸಿದು ಬೆಂಡಾದ ಹಣ್ಣು ಹಣ್ಣು ಮುದುಕಿ. ಇವಳಿಗೆ ಕೊಟ್ಟರೆ ತನಗೇನೂ ಹೆಸರು ಬರದೆಂದರಿತ ಶ್ರೀಮಂತ ಅವಳನ್ನು ಹಾಗೆಯೇ ಮುಂದೆ ಸಾಗಹಾಕಿದ.