Wednesday, January 18, 2017

ಹುಡುಕಾಟ

ನಿನ್ನ ಕಾಣಲು ಕಣ್ಣುಗಳು ಪರಿತಪಿಸಿವೆ ಗೆಳೆಯ,
ಕಿವಿಗಳು ನಿನ್ನ ಮಾತ ಕೇಳಲೂ...
ನಿನ್ನರವು ಹುಡುಕುತಿದೆ ನನ್ನಾತ್ಮ,
ನನ್ನುಸಿರಿನ ಪ್ರತಿ ಇಂಚಿಂಚಲೂ...

-ಮೆಹನಾzzz

Sunday, September 18, 2016

ಸಮಯಪ್ರಜ್ಞೆ

ಸೃಷ್ಟಿ ಗಡಬಡಿಸಿ ಹಾಸಿಗೆಯಿಂದ ಎದ್ದಳು. ಎಲ್ಲರೂ ಆಗಲೇ ಎದ್ದಿದ್ದಾರೆಂಬ ಸೂಚನೆಯಂತೆ ಬಾತ್-ರೂಮಿನಲ್ಲಿ ನೀರಿನ ಶಬ್ದ, ಅಡಿಗೆಮನೆಯಲ್ಲಿ ವಸ್ತುಗಳೆಲ್ಲ ಕೆಳಗೆ ಬೀಳುತ್ತಿರುವ ಸದ್ದುಕೇಳಿಸುತ್ತಿತ್ತು. ಬೆಡ್-ರೂಮಿನ ಗಡಿಯಾರವನ್ನು ನೋಡದೆ ಬೇಗಬೇಗನೆ ಅಡಿಗೆಮನೆಗೆ ಬಂದಳು. ಗಂಡ ಕಿರಣ್ ಆಗ ತಾನೇ ಮಾಡಿದ ಬಿಸಿ ಬಿಸಿ ಕಾಫಿಯನ್ನು ಅವಳಿಗಾಗಿಯೇ ತರುತ್ತಿದ್ದ. ಬೇಗಬೇಗನೆ ಕಾಫಿ ಕುಡಿದು ಹಾಲ್ ಗೆ ಬಂದಳು. ಹಾಲ್ ನ ಗಡಿಯಾರ 08:00 ಗಂಟೆ ತೋರಿಸುತ್ತಿತ್ತು. ಅಲ್ಲೇ ಬವಳಿ ಬಂದಂತಾಯಿತು. ' ಅಯ್ಯೋ , ಇವತ್ತೂ ಬಾಸ್ ನ ಬೈಗುಳ ಕೇಳಬೇಕಾಯಿತಲ್ಲ. ಇವತ್ತು ಬಾಸ್ ನನ್ನನ್ನು "ಇನ್ನು ಆಫೀಸಿಗೆ ಬರಲೇಬೇಡ" ಎನ್ನುವುದಂತೂ ಗ್ಯಾರಂಟಿ ' ಎಂದುಕೊಂಡು, ಬಾತ್ ರೂಮಿನಲ್ಲಿದ್ದ ಮಗ ಆನಂದ್ ಹೊರಬರುತ್ತಿದ್ದಂತೆಯೇ ಬೇಗ ಬೇಗ ಹೋಗಿ ಸ್ನಾನ ಮುಗಿಸಿದಳು. ಬೇಗ ಬೇಗ ಅಡಿಗೆ ಕೆಲಸ ಮುಗಿಸಿ, ಎಲ್ಲರಿಗೂ ಬಡಿಸಿ, ತಾನೂ ತಿಂದು, ಗಂಡನಿಗೆ "ರೀ , ನೀವು ಆನಂದ್ ನನ್ನು ಸ್ಕೂಲಿಗೆ ಬಿಟ್ಟು, ನಿಧಾನವಾಗಿ ಆಫೀಸಿಗೆ ಹೋಗುವಿರಂತೆ. ನಾನೊಮ್ಮೆ ಬೇಗ ನಮ್ಮ ಆಫೀಸ್ ಸೇರಿಬಿಡುತ್ತೇನೆ." ಎಂದವಳೇ ಬ್ಯಾಗ್ ಹಿಡಿದುಕೊಂಡು, ಚಪ್ಪಲಿ ಮೆಟ್ಟಿ ಹೊರಬಂದು ಕಿರಣ್ ಎಷ್ಟೇ ಕೂಗಿಕೊಂಡರೂ ಕೇಳಿಸಿಕೊಳ್ಳದವಳಂತೆ ಬಸ್ ಸ್ಟಾಪಿಗೆ ಓಡಿದಳು.

ಬಸ್ ಇನ್ನೂ ಬರದಿದ್ದುದನ್ನು ಕಂಡು ಅಲ್ಲಿಯೇ ಶತ-ಪಥ ತಿರುಗಿದಳು. ಬಸ್ ಬರುತ್ತಿದ್ದಂತೆಯೇ ಬಸ್ ಸರಿಯಾಗಿ ನಿಲ್ಲುವ ಮುಂಚೆಯೇ ಅದಕ್ಕೆ ಹಾರಿದಳು. ಇತರ ಪ್ರಯಾಣಿಕರ ಆಕ್ಷೇಪಣೆಗೆ ಕಿವಿಗೊಡಲಿಲ್ಲ. ಅದೃಷ್ಟಕ್ಕೆ ಕಿಟಿಕಿ ಬಳಿಯ ಸೀಟೇ ಸಿಕ್ಕಿಬಿಟ್ಟಿತು. ಈ ರೀತಿ ಬಸ್ಸಲ್ಲಿ ಕುಳಿತುಕೊಳ್ಳದೆ ಎಷ್ಟು ದಿನಗಳಾದವೋ ಎಂದು ಆರಾಮವಾಗಿ ಕುಳಿತು, ಬಸ್ ಇಡೀ ಅವಲೋಕಿಸಿದಳು. ಬಸ್ಸಿನಲ್ಲಿ ಯಾವಾಗಲೂ ಬರುತ್ತಿದ್ದ ಮಾಮೂಲಿ ಪ್ರಯಾಣಿಕರು ಯಾರೂ ಕಾಣಿಸಲಿಲ್ಲ. ಅದೂ, ಯಾವಾಗಲೂ ಸಿಗುತ್ತಿದ್ದಆ  ಧಡೂತಿ ಹೆಂಗಸು ಕಾಣದಿದ್ದುದನ್ನು ಕಂಡು ಖುಷಿಯಾಯಿತು. ಯಾಕೆಂದರೆ ಆ ಹೆಂಗಸು ದಿನಾಲೂ ಬಸ್ಸಿನಲ್ಲಿ ಅವಳು ಯಾವ ಮೂಲೆಯಲ್ಲಿದ್ದರೂ ಗುರುತಿಸಿ ಹತ್ತಿರಕ್ಕೆ ಬಂದು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿತ್ತು. ಅದೂ ದಿನವೂ ಒಂದೇ ಪ್ರಶ್ನೆ. ಕೇಳಿದ ಪ್ರಶ್ನೆಗಳನ್ನೇ ಪುನಃ ಪುನಃ ಕೇಳಿ ತಲೆಚಿಟ್ಟು ಹಿಡಿಸುತ್ತಿತ್ತು. ಆಫೀಸ್ ಟೆನ್ಶನ್ ಜೊತೆ ಇದೊಂದು ಪ್ರಾರಬ್ಧ. ಸದ್ಯ ಈಗಿಲ್ಲ.

ಆಫೀಸ್ ಎಂದ ಕೂಡಲೇ ನೆನಪಾಯಿತು. ಈ ಬಸ್ ಯಾವಾಗೊಮ್ಮೆ ಆಫೀಸ್ ಹತ್ತಿರ ನಿಲ್ಲುವುದೋ ಎಂದು ಚಡಪಡಿಸತೊಡಗಿದಳು. ಬಾಸ್ ಯಾವಾಗಲೂ ಹೇಳುತ್ತಿದ್ದ ಮಾತು ನೆನಪಿಗೆ ಬಂತು. "ಏ ಸೃಷ್ಟಿ, ನಮ್ಮಿಬ್ಬರನ್ನೂ ಒಂದೇ ದೇವರು ಸೃಷ್ಟಿಸಿದ್ದು. ಆ ದೇವರು ನನ್ನನ್ನು ಅಪಾರ ಸಹನಾಮಯನನ್ನಾಗಿ ಸೃಷ್ಟಿಸಿದ. ಅದೇ ದೇವರ ಸೃಷ್ಟಿಯಾದ ನೀನು ಯಾಕೆ ನನ್ನಲ್ಲಿ ಇಲ್ಲದ ಕೋಪವನ್ನು ಸೃಷ್ಟಿಸುತ್ತಿ?" ಈ ಮಾತುಗಳಿಂದ ಎಷ್ಟು ತಪ್ಪಿಸಿಕೊಳ್ಳಲು ಯತ್ನಿಸಿದರೂ ಹೆಚ್ಚು ಹೆಚ್ಚು ತಡವಾಗುತ್ತದೆಯೇ ವಿನಃ ಒಮ್ಮೆಯೂ ಬೇಗ ಹೋಗಲು ಸಾಧ್ಯವಾಗಿಲ್ಲವಲ್ಲ. ಕಿರಣ್ ಆದರೂ ನನ್ನನ್ನು ಬೇಗ ಎಬ್ಬಿಸಬಾರದೇ? ಕೇಳಿದರೆ "ನೀನು ಮಲಗಿದ್ದೆಯಲ್ಲ, ಎಬ್ಬಿಸಲು ಮನಸ್ಸು ಬರಲಿಲ್ಲ" ಎಂಬ ಉತ್ತರ ಸಿದ್ಧವಾಗಿರುತ್ತಿತ್ತು. ಆನಂದ್ ನಲ್ಲಿ ಕೇಳಿದರೆ ಸುಮ್ಮನೆ ನಗುತ್ತಾನೆ. ಅವನಲ್ಲಿ ಕೇಳಿ ಏನೂ ಪ್ರಯೋಜನವಿಲ್ಲ. ಅಲಾರ್ಮ್ ಸದ್ದಂತೂ ತನ್ನನ್ನು ಎಬ್ಬಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಂತಹ ಕುಂಭಕರ್ಣ ನಿದ್ದೆ ತನ್ನದೆಂದು ಯೋಚಿಸಿ ನಿಟ್ಟುಸಿರುಬಿಟ್ಟಳು.

ಎಷ್ಟು ಹೊತ್ತಾಯ್ತೋ ಏನೋ ಎಂದು ಬ್ಯಾಗಿಗೆ ಕೈ ಹಾಕಿದರೆ ಮೊಬೈಲ್ ಬ್ಯಾಗಲ್ಲಿ ಇರಲಿಲ್ಲ. ಗಡಿಬಿಡಿಯಲ್ಲಿ ಮನೆಯಲ್ಲೇ ಬಿಟ್ಟು ಬಂದಿರಬೇಕೆಂದು ಆಲೋಚಿಸಿದಳು. ಅಯ್ಯೋ, ಇವತ್ತಾದರೂ ಬಾಸ್ ನ ಮೂಡ್ ಚೆನ್ನಾಗಿದ್ದು ಏನೂ ಬೈಯ್ಯದಿದ್ದರೆ ಸಾಕಪ್ಪ ದೇವರೇ! ಪಕ್ಕದಲ್ಲಿದ್ದವರ ಬಳಿ ಸಮಯವೆಷ್ಟಾಯಿತೆ೦ದು ಕೇಳೋಣವೆಂದರೆ, ಪಕ್ಕದಲ್ಲಿ ಕುಳಿತಿದ್ದಾತ ಚೆನ್ನಾಗಿ ಗೊರಕೆ ಹೊಡೆಯುತ್ತಿದ್ದ.  'ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ' ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲವೆನಿಸಿತು. ಹಿಂದಕ್ಕೆ ತಿರುಗಿದರೆ, ಹಿಂದಿನ ಸೀಟಿನಲ್ಲಿ ಕುಳಿತಿದ್ದವರು ಬಹುಶಃ ಸಂಬಂಧಿಕರಿರಬೇಕು, ಆರಾಮವಾಗಿ ಹರಟೆ ಹೊಡೆಯುತ್ತಿದ್ದರು. ಅಸೂಯೆಯಾಯಿತು ಅವರನ್ನು ನೋಡಿ, ತಾನು ಅಷ್ಟು ಆರಾಮವಾಗಿ ಹರಟೆ ಹೊಡೆಯಲಾರೆನಲ್ಲಾ ಎಂದು. ಯಾಕೆಂದರೆ ಸೃಷ್ಟಿಯದು ಯಾಂತ್ರಿಕ ಜೀವನ. ಬೆಳಗ್ಗೆ ಎದ್ದು ಆಫೀಸಿಗೆ ಹೋಗಬೇಕು, ಆಫೀಸಿನಲ್ಲಿ ಕತ್ತೆಯಂತೆ ದುಡಿಯಬೇಕು, ಬಾಸಿನ ಬೈಗುಳ ತಿನ್ನಬೇಕು, ಸಂಜೆ ಮನೆಗೆ ಬರಬೇಕು, ಮತ್ತದೇ ಅಡಿಗೆ ಕೆಲಸ. ನಂತರ ಮಲಗಿ, ಬೆಳಗಾದರೆ ಎದ್ದು, ಮತ್ತದೇ ಪುನರಾವರ್ತನೆ. ದೊಡ್ಡ ನಿಟ್ಟುಸಿರೊಂದನ್ನು ಬಿಟ್ಟಳು. ಆಗಲೇ ಇಳಿಯಬೇಕಾದ ಬಸ್ ಸ್ಟಾಪ್ ಬಂದಿದ್ದರಿಂದ ಅವರಲ್ಲಿ ಸಮಯ ಎಷ್ಟಾಯಿತೆ೦ದು ಕೇಳಲು ಹೋಗದೆ ಬಸ್ಸಿನಿಂದ ಇಳಿದಳು. ಇನ್ನು ಆಫೀಸಿಗೆ ಹೋಗಿ ಬಾಸಿನ ಬೈಗುಳ ತಿನ್ನಬೇಕಲ್ಲಾ ಎಂದು ವ್ಯಥೆಯಾಯಿತು. ಆದರೂ ಬೇರೆ ದಾರಿಯಿಲ್ಲವೆಂದುಕೊಂಡು ಕಾಲೆಳೆದುಕೊಂಡು ಆಫೀಸಿಗೆ ನಡೆದಳು. 

ಆಫೀಸ್ ಪ್ರವೇಶಿಸುತ್ತಿದ್ದಂತೆ ಅನುಮಾನ ಕಾಡಿತು, ತಾನು ನಿಜವಾಗಿಯೂ ಅದೇ ಆಫೀಸಿಗೆ ಬಂದಿದ್ದೇನೆಯೇ ಎಂದು. ಯಾಕೆಂದರೆ ಅಲ್ಲಿ ಸಂಪೂರ್ಣ ಮೌನ, ಯಾವುದೇ ಶಬ್ದ ಕೇಳಿಬರಲಿಲ್ಲ. ತಪ್ಪಿ ಬಂದೆನೇ? ಎಂದು ಯೋಚಿಸುತ್ತಿದ್ದಂತೆ ಒಳಗೆ ಒಂದು ಮೂಲೆಯಲ್ಲಿ ಕುಳಿತಿದ್ದ ಗೂರ್ಖ ಕಾಣಿಸಿದ. ಹಾಗಾದರೆ ತಾನಿಲ್ಲಿಗೆ ತಪ್ಪಿ ಬಂದಿಲ್ಲ, ಸರಿಯಾದ ಸ್ಥಳಕ್ಕೇ ಬಂದಿದ್ದೇನೆ ಎಂದುಕೊಂಡು ಒಳಗೆಬಂದರೆ ಏನಾಶ್ಚರ್ಯ! ಒಳಗೆ ಗೂರ್ಖನನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ತನಗೆ ಗೊತ್ತಿಲ್ಲದಂತೆ ಸ್ಟ್ರೈಕ್ ಏನಾದರೂ? ಹೇಗೂ ಎರಡು ವರ್ಷಗಳಿಂದೀಚೆಗೆ ಯಾರಿಗೂ ಸಂಬಳ ಜಾಸ್ತಿ ಮಾಡಿಲ್ಲ. ಗೂರ್ಖನನ್ನು ಕೇಳೋಣವೆಂದು ತಿರುಗಿದರೆ, ಅವನು ಅವಳನ್ನೇ ವಿಚಿತ್ರವೆನ್ನುವಂತೆ ನೋಡುತ್ತಿದ್ದುದನ್ನು ಕಂಡು ಇನ್ನಷ್ಟು ಆಶ್ಚರ್ಯಪಟ್ಟಳು. ಗೂರ್ಖ ಕೇಳಿದ, "ಏನಮ್ಮ, ಇವತ್ತು ಇಷ್ಟು ಬೇಗ ಬಂದಿದ್ದೀರಿ? ಇಲ್ಲದಿದ್ದರೆ ಬಾಸಿನ ಆಶೀರ್ವಾದ(?) ಕೇಳದೆ ನೀವು ಬೇರೆ ಕೆಲಸ ಹಚ್ಕೊಳಲ್ಲವಲ್ಲ? ಏನಮ್ಮ, ಇವತ್ತು ಸೂರ್ಯ ಪಶ್ಚಿಮದಿಂದ ಉದಯಿಸಿದಾನೇನಮ್ಮಾ? ಅಥವಾ ನಾನೇನಾದರೂ ಕನಸು ಕಾಣುತ್ತಿದ್ದೇನಾ?" ಒಬ್ಬ ಸಾಮಾನ್ಯ ಗೂರ್ಖನೂ ನನ್ನನ್ನು ಪ್ರಶ್ನಿಸುವಂತಾಯಿತಲ್ಲ ಮನಸ್ಸಿನ ಒಂದು ಕಡೆಯಲ್ಲಿ ದುಃಖವಾದರೆ,ಇನ್ನೊಂದು ಕಡೆ, ಇದೆಲ್ಲ ಹೇಗಾಯಿತು? ಎನ್ನುವ ಆಶ್ಚರ್ಯ. 'ದ್ವಂದ್ವ ಪರಿಸ್ಥಿತಿ' ಎಂದರೇನೆಂದು ಈಗ ಅರ್ಥವಾಯಿತು ಅವಳಿಗೆ. 

ಆಫೀಸಿನ ಗೋಡೆ ಗಡಿಯಾರದ ಕಡೆ ನೋಡಿದಾಗ, ಬರೀ 08:00 ಆಗಿತ್ತಷ್ಟೆ. ಸುಮ್ಮನೆ ಗಡಿಬಿಡಿ ಮಾಡಿಬಿಟ್ಟೆ. ಮನೆಯ ಹಾಲ್ ನ ಗಡಿಯಾರ ಸರಿಯಿರಲಿಲ್ಲವೆಂದು ಅನಿಸಿತವಳಿಗೆ. ಇನ್ನು ಉಳಿದ ಸಹೋದ್ಯೋಗಿಗಳೆಲ್ಲಾ ಈಗ ಹೇಗೆ ಪ್ರತಿಕ್ರಿಯಿಸಬಹುದೆನ್ನುವ ಕಾತರದಿಂದಲೇ ಸಂತೋಷದಿಂದ ಅವಳ ಮುಖ ಊರಗಲವಾಯಿತು. ಎಲ್ಲಕ್ಕಿಂತಾ ಹೆಚ್ಚಾಗಿ, ಇವತ್ತಾದರೂ ಬಾಸಿನ ಬಾಯ ಬೈಗುಳದಿಂದ ತಪ್ಪಿಸಿಕೊಂಡು, ಹೊಗಳಿಸಿಕೊಳ್ಳಬಹುದಲ್ಲಾ ಎಂದು ಅತಿಯಾದ ಸಂತೋಷದಿಂದ ಹಕ್ಕಿಯಂತೆ ಹಾರಾಡಿದಳು.


-ಮೆಹನಾzzz

Friday, May 27, 2016

ಕನಸು

ಅದೆಲ್ಲೋ  ಕಳೆದು ಹೋಯಿತು, ಆ ಸುಂದರ ಕನಸು
ನೆನೆವೆಯೆಂದರೂ ನೆನಪಾಗಲೊಲ್ಲದು.
ಕೆಲ ಕನಸುಗಳೇ ಹಾಗೆ, ಅವು ಕೇವಲ ಕನಸುಗಳು
ಏನೆಂದರೂ ನನಸಾಗಲೊಲ್ಲವು.

ಮೆಹನಾzzz 

Thursday, May 26, 2016

ಕಣ್ಣು

ನನ್ನ ಜೀವವೇ ಬಂದು ನನ್ನ ಕಣ್ಣಲ್ಲಿ ಕಣ್ಣ ಬೆರೆತರೂ,
ಹೇಳಲಾರದೆ ಹೋದೆ ನನ್ನ ಪ್ರೀತಿಯಾ...
ಹೇಳದಿದ್ದರೂ ಕಾಣದೆ ಹೋಯಿತೆ ನನ್ನ ಕಣ್ಣಲ್ಲಿ,
ಅದೆಷ್ಟೋ ವರ್ಷ ಬಚ್ಚಿಟ್ಟ ಪ್ರೇಮ, ಇನಿಯಾ???

ಮೆಹನಾzzz


ಸೌಂದರ್ಯ

ಕುರೂಪಿಯಾದರೂ 
ಅವನಿಗವಳೆ 
ರಂಭೆ - ಊರ್ವಶಿ. 
ಯಾಕೆಂದರೆ 
ಅವಳಪ್ಪನ ಬಳಿಯಿದೆ 
ದುಡ್ಡು ರಾಶಿರಾಶಿ!!

-ಮೆಹನಾzzz 


Friday, May 6, 2016

ಕಾತರ

ಹಕ್ಕಿಯ ಇಂಚರ ಆಲಿಸುತ
ಅದರ ಹಿಂದೆ ನಡೆದೆ...
ನಿನ್ನುಸಿರ ದನಿಯ ಕೇಳಿ ನಾ
ಮುನ್ನಡೆಯದೆ ನಿಂತೆ...

ಕುಹೂ ಕುಹೂ ಕೋಗಿಲೆಯ
ನಾ ಅನುಕರಿಸಹೊರಟೆ...
ನಿನ್ನ ಪಿಸುದನಿಯ ಕೇಳಿ ನಾ
ಮೂಕಳಾಗಿ ನಿಂತೆ...

ಅದ್ಯಾವುದೋ ಮಾಯೆ ನನ್ನ ಆವರಿಸಿದೆ...
ನಿನ್ನ ಕಾಣಲು ನನ್ನ ಹೃದಯ ಚಡಪಡಿಸಿದೆ...

ಮುಂಜಾನೆಯ ಸೂರ್ಯನ ಉದಯ
ಕಾಣಲು ನಾ ಕಾತರಿಸಿದೆ...
ಸೂರ್ಯನ ಬದಲು ನೀನೇ ಕಾಣಲು
ನಾಚಿ ನಾ ಕೆಂಪೇರಿದೆ...

ಬೆಳದಿಂಗಳ ಚಂದಿರ ಕಾಣಲು
ಸುಂದರವೇ ತಾನೆ...
ಚಂದಿರನಲ್ಲೂ ನಿನ್ನದೇ ಬಿಂಬ
ಯಾಕೋ ಕಾಣೆ...

ಅದ್ಯಾವುದೋ ಮಾಯೆ ನನ್ನ ಆವರಿಸಿದೆ...
ನಿನ್ನ ಕಾಣಲು ನನ್ನ ಹೃದಯ ಚಡಪಡಿಸಿದೆ...

-ಮೆಹನಾzzz 

Thursday, May 5, 2016

ಆಕರ್ಷಣೆ

ಅವನ ರೂಪ, ಸಧ್ರಡ ಮೈಕಟ್ಟು, ಸ್ಟೈಲ್, ಸ್ಮೈಲ್, ಹೀರೋಯಿಸಂಗೆ ಮನಸೋತು, ಮೆಚ್ಚಿ ಅವನನ್ನು ಕೈ ಹಿಡಿದವಳು ಮದುವೆಯ ನಂತರ ಅವನ ಹಟಮಾರಿತನ, ಅಲೆಮಾರಿತನ, ದುಶ್ಚಟ, ರೌಡಿಸಂಗಳಿಗೆ ಬೇಸತ್ತು ವಿಚ್ಛೇದನೆಗೆ ಅರ್ಜಿ ಹಾಕಿದಳು.

-ಮೆಹನಾzzz