Monday, February 29, 2016

ನೆನಪು


"ಗೆಳತಿಗಿಂತ ಜಾಸ್ತಿ ಪ್ರೇಯಸಿಗಿಂತ ಕಮ್ಮಿ".

ನನ್ನ ಬಗ್ಗೆ ಯಾವಾಗ ಕೇಳಿದರೂ ಹೀಗೇ ಅಲ್ಲವೇ ನೀ ಅನ್ನುತಿದ್ಧುದು. ಜಾಣ ನೀನು. ನಾನೇ ಪೆದ್ದಿ, ನಾ ನಿನ್ನ ಗೆಳತಿ ಮಾತ್ರ, ಅದ್ಯಾವಳೋ ಮಾಟಗಾತಿ ನಿನ್ನ ಹೃದಯ ಕದ್ದಿದ್ದಾಳೆಂದೇ ತಿಳಿದಿದ್ದೆ. ನಿನ್ನ ಬಗ್ಗೆ ಆಕರ್ಷಣೆ ಅಷ್ಟೇನೂ ಇರಲಿಲ್ಲ. ಆದರೂ ನೀ ಅವಳ ಬಗ್ಗೆ ವರ್ಣಿಸುವಾಗ, ಅವಳ ಅಂದ- ಚಂದ, ಹಾವ ಭಾವ, ಅವಳ ಮುಗ್ಧ ಮನಸ್ಸು.. ಅಯ್ಯೋ, ಈ ಹುಡುಗ ಪ್ರೀತಿಯಲ್ಲಿ ಹುಚ್ಚನಾಗಿಬಿಟ್ಟಿರುವನೇನೋ ಎಂದೆನಿಸುತಿತ್ತು. ಎಲ್ಲೋ ಮನದಂಗಳಲ್ಲಿ ಆ ಹುಡುಗಿ ನಾನೇ ಆಗಿರಬಾರದಿತ್ತೇ? ಅನ್ನುವ ಅಸೂಯೆ.. ಇಲ್ಲಾ, ಈ ಥರ ಹುಚ್ಚನಂತೆ ಪ್ರೀತಿಸುವ ಹುಡುಗ ನನಗೂ ಸಿಗುವನೇ ಎಂಬ ಆಸೆ.. ಒಟ್ಟಿನಲ್ಲಿ ಬರಡಾಗಿದ್ದ ನನ್ನ ಹೃದಯದಲ್ಲೂ ಪ್ರೀತಿಯ ಮೊಳಕೆ ಹುಟ್ಟಿಸಿದವನು ನೀನೇ ಕಣೋ.

ಆ ಹುಡುಗಿ ಯಾರೆಂದುಎಷ್ಟೇ ಕೇಳಿದರೂ ಬಾಯಿ ಬಿಡದ ನೀನು, "ನಿನಗೆ ತಿಳಿದವಳೇ" ಎಂದು ಭುಜ ಕುಣಿಸಿ ಹೋಗುತ್ತಿದ್ದಾಗ ನಿನ್ನ ತುಟಿಯಂಚಿನ ನಸುನಗುವನ್ನು ಕಾಣದವಳಲ್ಲ ನಾನು. ಆ ಹುಡುಗಿಯ ಹೆಸರು ತಿಳಿಯಲು ಅದೆಷ್ಟು ಕಾಡಿ ಬೇಡಿದೆ ನಿನ್ನ. "ನಾನಿನ್ನೂ ಅವಳಿಗೆ ಹೇಳಿಲ್ಲ ಕಣೆ. ಅವಳಿಗೆ ನನ್ನ ಪ್ರೇಮ ನಿವೇದನೆ ಮಾಡುವ ಮುಂಚೆ ನಿನಗೆ ಹೇಳಿಯೇ ಹೋಗುವೆ. ಬೇಕಾದರೆ ನಿನ್ನ ಮುಂದೆಯೇ ಅವಳಿಗೆ ಪ್ರಪೋಸ್ ಮಾಡುವೆ, ಹ್ಯಾಪೀ?" ಎಂದಾಗ ನಿನ್ನ ಕಣ್ಣಂಚಿನಿಂದ ಜಾರಿದ ನೀರ ಹನಿ ಅದ್ಯಾವುದೋ ಹೊಸ ಸತ್ಯ ತೆರೆದಿಟ್ಟ೦ತಾಯಿತು. ಅದೇನೋ ಅಭದ್ರತೆ ನಿನ್ನನ್ನು ಕಾಡುವುದು ಖಚಿತವಾಯಿತು. "ಏನಾಯ್ತೋ? ನಾ ನಿನ್ನ ಬೆಸ್ಟ್ ಫ್ರೆಂಡ್ ಅಲ್ವಾ? ಏನಾಯಿತು ಹೇಳು." ಎಂದಾಗ "ಅವಳು ನನ್ನ ರಿಜೆಕ್ಟ್ ಮಾಡಿಬಿಟ್ಟರೆ ನಾ ಖಂಡಿತ ಉಳಿಯಲಾರೆ. ಅವಳು ನನ್ನ ಜೀವ ಕಣೆ". ಕಣ್ಣಿಂದ ಜಾರಿದ ಹನಿಯೊಂದು ನಿನ್ನ ಕೆನ್ನೆ ತೋಯಿಸಿದಾಗ ,"ಅಯ್ಯೋ ಹುಚ್ಚಪ್ಪ, ಅಷ್ಟು ಪ್ರೀತಿಸೋ ನಿನ್ನ ಅವಳ್ಯಾಕೆ ರಿಜೆಕ್ಟ್ ಮಾಡ್ತಾಳೆ? she is lucky to have a guy like you. ಹೇಗೂ ನನ್ನ ಮುಂದೆಯೇ ಪ್ರಪೋಸ್ ಮಾಡ್ತಿಯಲ್ಲ? ನಾ ನಿನಗೆ ಹೆಲ್ಪ್ ಮಾಡ್ತೀನಿ. ಓಕೇ?" ಎಂದು ನಿನಗೆ ಸಮಾಧಾನ ಮಾಡಿ ಕಣ್ಣೊರೆಸುವಷ್ಟರಲ್ಲಿ ನನಗೆ ಸಾಕು ಸಾಕಾಗಿತ್ತು.


ಅಂತೂ ಬಹು ನಿರೀಕ್ಷೆಯ ಆ ದಿನ ಬಂದೇ ಬಿಡ್ತು. ಕ್ಯಾಂಪಸ್ ರೆಕ್ರೂಟ್‌ಮೆಂಟ್ ಅಲ್ಲಿ ಜಾಬ್ ಸಿಕ್ಕ ತಕ್ಷಣ ಅವಳಿಗೆ ಪ್ರಪೋಸ್ ಮಾಡುವ ದಿನ ಬೆಳಿಗ್ಗೆಯೇ ಹೇಳಿದ್ದೆ ನೀನು. ಮಧ್ಯಾಹ್ನಕ್ಕೆ ಮುಂಚೆಯೇ ನನ್ನ ನೋಡಲು ಓಡೋಡಿ ಬಂದ ನಿನ್ನ ಕಂಡು ಹೆದರಿಬಿಟ್ಟಿದ್ದೆ. ಥೇಟ್ ದೇವದಾಸ್ ತರ ಕಾಣುತ್ತಿದ್ದೆ ನೀನು. ಮಾತಾಡಲೂ ತೊದಲುತ್ತಿದ್ದ ನಿನ್ನನ್ನು ಕಂಡು ನಕ್ಕು ಬಿಟ್ಟಿದ್ದೆ ನಾನು. " ನೀ ಹೀಗೆ ಪ್ರಪೋಸ್ ಮಾಡಿದರೆ ಹೆದರಿ ಓಡಿ ಹೋಗಬಹುದು ಅವಳು". ಎಂದೆ. ನೀ ನಗಲಿಲ್ಲ. "ಓಕೇ. ಈಗಲಾದರೂ ಹೇಳು. ಯಾರವಳು?" ಕಣ್ಣ ಹುಬ್ಬು ಮೇಲೇರಿಸಿ ಕೇಳಿದಾಗ "ಇಲ್ಲೇ ಇದ್ದಾಳೆ. ನೋಡಬೇಕಾ?" ಆಚೀಚೆ ನೋಡಿದೆ. ಯಾರೂ ಕಾಣಲಿಲ್ಲ. "ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು. ಅವಳು ಕಾಣಬಹುದು" ಎಂದಾಗ ಅವನ ಕಣ್ಣಲ್ಲಿ ನನ್ನದೇ ಬಿಂಬ ಮಂಜು ಮಂಜಾಗಿ ಕಾಣಿಸಿತು. "ನನ್ನ ಕಣ್ಣಲ್ಲಿ ಮಾತ್ರವಲ್ಲ. ಹೃದಯದಲ್ಲೂ ನಾನು ಪ್ರತಿಷ್ಟಾಪಿಸಿದ್ದು ನಿನ್ನನ್ನು ಮಾತ್ರ".

ಮೈಯಲ್ಲೆಲ್ಲ ಕರೆಂಟ್ ಹೊಡೆಸಿಕೊಂಡಂತೆ ಶಾಕ್ ನನಗೆ. ಅರಗಿಸಿಕೊಳ್ಳಲಾಗಲಿಲ್ಲ ಈ ನಿಜವನ್ನು. ಜೋಕ್ ಮಾಡುತ್ತಿಡ್ದಿಯೇನೋ ಅಂದುಕೊಂಡೆ. ನಿನ್ನ ಮೊಗದಲ್ಲಿದ್ದ ದೈನ್ಯ ಭಾವ ಅದನ್ನು ಅಲ್ಲಗಳೆಯಿತು. ಯಾಕೋ ಏನೋ, ಜೋರಾಗಿ ಅಳಬೇಕೆಂದೆನಿಸಿತು. ನಿನ್ನ ಮುಂದೆ ನಿಲ್ಲಲಾಗಲಿಲ್ಲ. ನೀನು ಮೋಸಗಾರನಂತೆ ಕಂಡೆ ನನಗೆ. ಗೆಳೆತನದ ಹೆಸರಲ್ಲಿ ಪ್ರೀತಿಯ ಮೋಸ.

ಅದಾದ ನಂತರ ನಡೆದದ್ದೆಲ್ಲ ಪವಾಡ. ನಮ್ಮ ಮದುವೆಗೆ ಈಗ ಆಲ್ಮೋಸ್ಟ್ ಮೂರು ವರ್ಷವಾದರೂ ಈಗಲೂ ನೀನು ನನ್ನ ಮುದ್ದು ಅಪ್ಪು. ಗಂಡ ಹೆಂಡತಿಗಿಂತ ಮಿಗಿಲಾದ ಗೆಳೆತನವೆಂಬ ಬಂಧ ಇನ್ನೂ ದೂರಾಗಿಲ್ಲ. ಥ್ಯಾಂಕ್ಸ್ ಕಣೋ. ಹೀಗೇ ಎಂದೆಂದಿಗೂ ನನ್ನ ಜೊತೆಯೇ ಇದ್ದುಬಿಡು. ನನ್ನ ಬೆಸ್ಟ್ ಫ್ರೆಂಡ್ ಆಗಿ ಕೊನೆಯುಸಿರಿನ ತನಕ. 


-ಮೆಹನಾzzz 

2 comments: