ಕಣ್ಣುಗಳು ಅತ್ತು ಅತ್ತು ಊದಿಕೊಂಡಿದ್ದವು. ಇಷ್ಟು ಬೇಗ ಮದುವೆಗೆ ಗಂಡು ಹುಡುಕಿದ್ದಾಳಲ್ಲ, ನಾನೇನು ಅಷ್ಟು ಬೇಗ ಭಾರವಾಗಿ ಹೋದೆನೆ ಹೆತ್ತಮ್ಮನಿಗೆ? ತಾನು ಜೀವನದಲ್ಲಿ ಅನುಭವಿಸಿದ ಕಷ್ಟ-ಕಾರ್ಪಣ್ಯಗಳು ಸಾಲದೆಂಬಂತೆ ನನ್ನ ತಲೆಗೂ ಹೊಸ ನೋವು ಕಟ್ಟಬೇಕೆಂದಿದ್ದಾಳಾ ಅವಳು? ಈಗ ತಾನೆ ಡಿಗ್ರಿ ಮುಗಿಸಿ ತನ್ನ ಕಾಲ ಮೇಲೆ ನಿಲ್ಲುವೆನೆಂಬ ಭರವಸೆಯೊಂದಿಗೆ ಕೆಲಸ ಹುಡುಕಲಾರಂಭಿಸಿದ ನೀತಾಳಿಗೆ ಈಗ ತಾನೇ ಆದ ಘಟನೆ ಮರೆಯಲಾಗುತ್ತಿಲ್ಲ.
ಧೋ ಎಂದು ಸುರಿಯುವ ಮಳೆಗೆ ಒದ್ದೆಯಾಗದಂತೆ ರಕ್ಷಿಸಲು ಕೊಡೆ ನಿಷ್ಪ್ರಯೋಜಕವೆಂದು ಅಲ್ಲೇ ಅದನ್ನು ಬಿಸುಡಿ ರಕ್ಕಸನಂತೆ ಬೆಳೆದಿದ್ದ ಆಲದ ಮರದಡಿ ನಿಂತಿದ್ದಳು ನೀತಾ. ಮಳೆ ಕಡಿಮೆಯಾಗುವ ಸೂಚನೆಯಿರಲಿಲ್ಲ. ಅಸಹನೆಯಿಂದ ಸುರಿಯುವ ಮಳೆಗೆ ಶಾಪ ಹಾಕುತ್ತಿದ್ದವಳ ಬಳಿ ನಿಂತಿತು ಒಂದು ಹಳೆಯ ಸ್ಕೂಟರ್. "ಬನ್ನಿ, ಮನೆ ತನಕ ಬಿಡುತ್ತೀನಿ", ಗಂಡು ದನಿ ಕೇಳಿಸಿತು. ಅತ್ತ ನೋಡಲಿಲ್ಲ ನೀತಾ. ಅವಳಿಗೆ ಗಂಡು ಜಾತಿಯೆಂದರೇನೇ ಅಲರ್ಜಿ. ಅವಳಿಗೆ ನಾಲ್ಕು ವರ್ಷ ಪೂರ್ತಿಯಾಗಿರಲಿಲ್ಲ, ಅವಳಮ್ಮ ಮುದ್ದಾದ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಳು. ಎರಡನೇ ಮಗುವೂ ಹೆಣ್ಣೆಂದು ತಿಳಿದ ಕೂಡಲೇ ಹೆಂಡತಿ ಮಕ್ಕಳನ್ನು ಬಿಟ್ಟು ಅದೆಲ್ಲೋ ಹೊರಟುಹೋಗಿದ್ದ ಮಹಾನುಭಾವನ ಮುಖದ ನೆನಪೂ ಇಲ್ಲ ಅವಳಿಗೆ. ಅವಳಮ್ಮ ಅವರಿವರ ಮನೆ ಮುಸುರೆ ತೊಳೆದು ತನ್ನಿಬ್ಬ ಹೆಣ್ಣುಮಕ್ಕಳನ್ನು ಸಾಕಿದ್ದಳು. ಅಮ್ಮನೆಂದರೆ ಪ್ರೀತಿಗಿಂತ ಜಾಸ್ತಿ ಹೆಮ್ಮೆ ಅವಳಿಗೆ.
"ನೀತಾ ಅವರೇ, ಮಳೆ ಸಧ್ಯಕ್ಕೆ ನಿಲ್ಲೋದಿಲ್ಲ. ಬನ್ನಿ." ಅದೇ ಗಂಡು ದನಿ. ಎಚ್ಚೆತ್ತು ಒಂದು ಕ್ಷಣ ಅವನನ್ನೇ ದಿಟ್ಟಿಸಿದಳು. ಮುಖ ಸರಿಯಾಗಿ ಕಾಣುತ್ತಿಲ್ಲ. ಹೆಲ್ಮೆಟ್ ಮುಖದ ಮುಕ್ಕಾಲು ಭಾಗ ಮುಚ್ಚಿದೆ. "ಪರವಾಗಿಲ್ಲ, ನಿಮ್ಮ ಕೆಲಸ ನೋಡಿ". ಮುಖ ಗಂಟಿಕ್ಕಿಯೇ ಹೇಳಿದಳು. "ನಿಮ್ಮ ಮನೆಯಿಂದಲೇ ಬರ್ತಾ ಇದ್ದೀನಿ. ನಿಮ್ಮಮ್ಮ ನೀವು ಮನೆಯಲ್ಲಿ ಇಲ್ಲ ಅಂದರು. ಹಾಗೇ ಹುಡುಕ್ಕೊಂಡು ಬಂದೆ."
ನೀತಳಿಗೆ ಶಾಕ್. "ಯಾರು ನೀವು? ನಮ್ಮ ಮನೆಗೆ ಯಾಕೆ ಹೋಗಿದ್ರಿ? ನನಗೇನೂ ಅರ್ಥ ಆಗ್ತಾ ಇಲ್ಲ."
"ನಾನು ಅರ್ಜುನ್. ನಿಮ್ಮಮ್ಮ ಎನೂ ಹೇಳಿಲ್ವ ನನ್ನ ಬಗ್ಗೆ? ನನ್ನ ಬಗ್ಗೆ ನಾನೇ ಹೇಳಿಕೊಳ್ಳೋದಕ್ಕಿಂತ ನೀವು ನಿಮ್ಮಮ್ಮನ್ನ ಕೇಳೋದೇ ಚೆನ್ನ. ನಾನಂತೂ ನಿಮ್ಮ ಫೋಟೋ ನೋಡುತ್ತಲೇ ಮದುವೆಗೆ ಒಪ್ಕೊಂಡು ಬಿಟ್ಟೆ."
ಶಾಕ್ ಮೇಲೆ ಶಾಕ್ ಅವಳಿಗೆ. ತನ್ನ ಕಿವಿಗಳನ್ನು ನಂಬಲಾಗುತ್ತಿಲ್ಲ. ತನಗೆ ಮದುವೆ? ಈತನ ಜೊತೆ? ಆಶ್ಚರ್ಯ! ಕೋಪ! ದುಃಖ! ಕಣ್ಣುಗಳು ಕೆಂಪಡರಿದವು. ಪುನಃ ಅವನ ಕಡೆ ನೋಡದೆ ಆ ಮಳೆಯಲ್ಲೇ ನೆನೆದುಕೊಂಡು ಮನೆಗೆ ಬಂದಿದ್ದಳು. ಹರಿಯುತ್ತಿರುವ ಕಣ್ಣೀರಧಾರೆಯನ್ನು ಒರೆಸಲೂ ಸಮಯವಿಲ್ಲದಂತೆ ಚಿಂತಿಸುತ್ತಿದ್ದಳು. ತನ್ನ ಗಂಡ ತನಗೆ ಮೋಸ ಮಾಡಿ ಒಂಟಿಯಾಗಿ ತನ್ನೆರಡು ಹೆಣ್ಣುಮಕ್ಕಳ ಜೊತೆ ಬಿಟ್ಟುಹೋಗಿದ್ದರೂ ಒಂದೇ ಒಂದು ಸಲ ಅವನ ಬಗ್ಗೆ ಒಳ್ಳೆಯದಾಗಲಿ, ಕೆಟ್ಟದ್ದಾಗಲಿ, ಅಮ್ಮ ಮಾತನಾಡಿಲ್ಲ. ತಿಳಿದದ್ದೆಲ್ಲ ಬೇರೆಯವರ ಮುಖಾಂತರವೇ ಮತ್ತೆ ಅಲ್ಪ ಸ್ವಲ್ಪ ನೆನಪುಗಳು. ಗಂಡ ಬಿಟ್ಟು ನಂತರ ಯಾವುದೇ ಗಂಡಸಿನ ಹಂಗಿಲ್ಲದೆ ಗಂಡಸಿಗೆ ಸಮನಾಗಿ ಕೂಲಿ ಕೆಲಸ ಮಾಡಿ, ಉಳಿದ ಸಮಯದಲ್ಲಿ ಅಕ್ಕಪಕ್ಕದ ಮನೆಯವರ ಕಸಮುಸುರೆ ತಿಕ್ಕಿ ತನ್ನ ಮಕ್ಕಳ ಹೊಟ್ಟೆ ತುಂಬಿಸಿದ್ದಳು.
(ಇನ್ನೂ ಇದೆ)
-ಮೆಹನಾzzz