Sunday, September 18, 2016

ಸಮಯಪ್ರಜ್ಞೆ

ಸೃಷ್ಟಿ ಗಡಬಡಿಸಿ ಹಾಸಿಗೆಯಿಂದ ಎದ್ದಳು. ಎಲ್ಲರೂ ಆಗಲೇ ಎದ್ದಿದ್ದಾರೆಂಬ ಸೂಚನೆಯಂತೆ ಬಾತ್-ರೂಮಿನಲ್ಲಿ ನೀರಿನ ಶಬ್ದ, ಅಡಿಗೆಮನೆಯಲ್ಲಿ ವಸ್ತುಗಳೆಲ್ಲ ಕೆಳಗೆ ಬೀಳುತ್ತಿರುವ ಸದ್ದುಕೇಳಿಸುತ್ತಿತ್ತು. ಬೆಡ್-ರೂಮಿನ ಗಡಿಯಾರವನ್ನು ನೋಡದೆ ಬೇಗಬೇಗನೆ ಅಡಿಗೆಮನೆಗೆ ಬಂದಳು. ಗಂಡ ಕಿರಣ್ ಆಗ ತಾನೇ ಮಾಡಿದ ಬಿಸಿ ಬಿಸಿ ಕಾಫಿಯನ್ನು ಅವಳಿಗಾಗಿಯೇ ತರುತ್ತಿದ್ದ. ಬೇಗಬೇಗನೆ ಕಾಫಿ ಕುಡಿದು ಹಾಲ್ ಗೆ ಬಂದಳು. ಹಾಲ್ ನ ಗಡಿಯಾರ 08:00 ಗಂಟೆ ತೋರಿಸುತ್ತಿತ್ತು. ಅಲ್ಲೇ ಬವಳಿ ಬಂದಂತಾಯಿತು. ' ಅಯ್ಯೋ , ಇವತ್ತೂ ಬಾಸ್ ನ ಬೈಗುಳ ಕೇಳಬೇಕಾಯಿತಲ್ಲ. ಇವತ್ತು ಬಾಸ್ ನನ್ನನ್ನು "ಇನ್ನು ಆಫೀಸಿಗೆ ಬರಲೇಬೇಡ" ಎನ್ನುವುದಂತೂ ಗ್ಯಾರಂಟಿ ' ಎಂದುಕೊಂಡು, ಬಾತ್ ರೂಮಿನಲ್ಲಿದ್ದ ಮಗ ಆನಂದ್ ಹೊರಬರುತ್ತಿದ್ದಂತೆಯೇ ಬೇಗ ಬೇಗ ಹೋಗಿ ಸ್ನಾನ ಮುಗಿಸಿದಳು. ಬೇಗ ಬೇಗ ಅಡಿಗೆ ಕೆಲಸ ಮುಗಿಸಿ, ಎಲ್ಲರಿಗೂ ಬಡಿಸಿ, ತಾನೂ ತಿಂದು, ಗಂಡನಿಗೆ "ರೀ , ನೀವು ಆನಂದ್ ನನ್ನು ಸ್ಕೂಲಿಗೆ ಬಿಟ್ಟು, ನಿಧಾನವಾಗಿ ಆಫೀಸಿಗೆ ಹೋಗುವಿರಂತೆ. ನಾನೊಮ್ಮೆ ಬೇಗ ನಮ್ಮ ಆಫೀಸ್ ಸೇರಿಬಿಡುತ್ತೇನೆ." ಎಂದವಳೇ ಬ್ಯಾಗ್ ಹಿಡಿದುಕೊಂಡು, ಚಪ್ಪಲಿ ಮೆಟ್ಟಿ ಹೊರಬಂದು ಕಿರಣ್ ಎಷ್ಟೇ ಕೂಗಿಕೊಂಡರೂ ಕೇಳಿಸಿಕೊಳ್ಳದವಳಂತೆ ಬಸ್ ಸ್ಟಾಪಿಗೆ ಓಡಿದಳು.

ಬಸ್ ಇನ್ನೂ ಬರದಿದ್ದುದನ್ನು ಕಂಡು ಅಲ್ಲಿಯೇ ಶತ-ಪಥ ತಿರುಗಿದಳು. ಬಸ್ ಬರುತ್ತಿದ್ದಂತೆಯೇ ಬಸ್ ಸರಿಯಾಗಿ ನಿಲ್ಲುವ ಮುಂಚೆಯೇ ಅದಕ್ಕೆ ಹಾರಿದಳು. ಇತರ ಪ್ರಯಾಣಿಕರ ಆಕ್ಷೇಪಣೆಗೆ ಕಿವಿಗೊಡಲಿಲ್ಲ. ಅದೃಷ್ಟಕ್ಕೆ ಕಿಟಿಕಿ ಬಳಿಯ ಸೀಟೇ ಸಿಕ್ಕಿಬಿಟ್ಟಿತು. ಈ ರೀತಿ ಬಸ್ಸಲ್ಲಿ ಕುಳಿತುಕೊಳ್ಳದೆ ಎಷ್ಟು ದಿನಗಳಾದವೋ ಎಂದು ಆರಾಮವಾಗಿ ಕುಳಿತು, ಬಸ್ ಇಡೀ ಅವಲೋಕಿಸಿದಳು. ಬಸ್ಸಿನಲ್ಲಿ ಯಾವಾಗಲೂ ಬರುತ್ತಿದ್ದ ಮಾಮೂಲಿ ಪ್ರಯಾಣಿಕರು ಯಾರೂ ಕಾಣಿಸಲಿಲ್ಲ. ಅದೂ, ಯಾವಾಗಲೂ ಸಿಗುತ್ತಿದ್ದಆ  ಧಡೂತಿ ಹೆಂಗಸು ಕಾಣದಿದ್ದುದನ್ನು ಕಂಡು ಖುಷಿಯಾಯಿತು. ಯಾಕೆಂದರೆ ಆ ಹೆಂಗಸು ದಿನಾಲೂ ಬಸ್ಸಿನಲ್ಲಿ ಅವಳು ಯಾವ ಮೂಲೆಯಲ್ಲಿದ್ದರೂ ಗುರುತಿಸಿ ಹತ್ತಿರಕ್ಕೆ ಬಂದು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿತ್ತು. ಅದೂ ದಿನವೂ ಒಂದೇ ಪ್ರಶ್ನೆ. ಕೇಳಿದ ಪ್ರಶ್ನೆಗಳನ್ನೇ ಪುನಃ ಪುನಃ ಕೇಳಿ ತಲೆಚಿಟ್ಟು ಹಿಡಿಸುತ್ತಿತ್ತು. ಆಫೀಸ್ ಟೆನ್ಶನ್ ಜೊತೆ ಇದೊಂದು ಪ್ರಾರಬ್ಧ. ಸದ್ಯ ಈಗಿಲ್ಲ.

ಆಫೀಸ್ ಎಂದ ಕೂಡಲೇ ನೆನಪಾಯಿತು. ಈ ಬಸ್ ಯಾವಾಗೊಮ್ಮೆ ಆಫೀಸ್ ಹತ್ತಿರ ನಿಲ್ಲುವುದೋ ಎಂದು ಚಡಪಡಿಸತೊಡಗಿದಳು. ಬಾಸ್ ಯಾವಾಗಲೂ ಹೇಳುತ್ತಿದ್ದ ಮಾತು ನೆನಪಿಗೆ ಬಂತು. "ಏ ಸೃಷ್ಟಿ, ನಮ್ಮಿಬ್ಬರನ್ನೂ ಒಂದೇ ದೇವರು ಸೃಷ್ಟಿಸಿದ್ದು. ಆ ದೇವರು ನನ್ನನ್ನು ಅಪಾರ ಸಹನಾಮಯನನ್ನಾಗಿ ಸೃಷ್ಟಿಸಿದ. ಅದೇ ದೇವರ ಸೃಷ್ಟಿಯಾದ ನೀನು ಯಾಕೆ ನನ್ನಲ್ಲಿ ಇಲ್ಲದ ಕೋಪವನ್ನು ಸೃಷ್ಟಿಸುತ್ತಿ?" ಈ ಮಾತುಗಳಿಂದ ಎಷ್ಟು ತಪ್ಪಿಸಿಕೊಳ್ಳಲು ಯತ್ನಿಸಿದರೂ ಹೆಚ್ಚು ಹೆಚ್ಚು ತಡವಾಗುತ್ತದೆಯೇ ವಿನಃ ಒಮ್ಮೆಯೂ ಬೇಗ ಹೋಗಲು ಸಾಧ್ಯವಾಗಿಲ್ಲವಲ್ಲ. ಕಿರಣ್ ಆದರೂ ನನ್ನನ್ನು ಬೇಗ ಎಬ್ಬಿಸಬಾರದೇ? ಕೇಳಿದರೆ "ನೀನು ಮಲಗಿದ್ದೆಯಲ್ಲ, ಎಬ್ಬಿಸಲು ಮನಸ್ಸು ಬರಲಿಲ್ಲ" ಎಂಬ ಉತ್ತರ ಸಿದ್ಧವಾಗಿರುತ್ತಿತ್ತು. ಆನಂದ್ ನಲ್ಲಿ ಕೇಳಿದರೆ ಸುಮ್ಮನೆ ನಗುತ್ತಾನೆ. ಅವನಲ್ಲಿ ಕೇಳಿ ಏನೂ ಪ್ರಯೋಜನವಿಲ್ಲ. ಅಲಾರ್ಮ್ ಸದ್ದಂತೂ ತನ್ನನ್ನು ಎಬ್ಬಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಂತಹ ಕುಂಭಕರ್ಣ ನಿದ್ದೆ ತನ್ನದೆಂದು ಯೋಚಿಸಿ ನಿಟ್ಟುಸಿರುಬಿಟ್ಟಳು.

ಎಷ್ಟು ಹೊತ್ತಾಯ್ತೋ ಏನೋ ಎಂದು ಬ್ಯಾಗಿಗೆ ಕೈ ಹಾಕಿದರೆ ಮೊಬೈಲ್ ಬ್ಯಾಗಲ್ಲಿ ಇರಲಿಲ್ಲ. ಗಡಿಬಿಡಿಯಲ್ಲಿ ಮನೆಯಲ್ಲೇ ಬಿಟ್ಟು ಬಂದಿರಬೇಕೆಂದು ಆಲೋಚಿಸಿದಳು. ಅಯ್ಯೋ, ಇವತ್ತಾದರೂ ಬಾಸ್ ನ ಮೂಡ್ ಚೆನ್ನಾಗಿದ್ದು ಏನೂ ಬೈಯ್ಯದಿದ್ದರೆ ಸಾಕಪ್ಪ ದೇವರೇ! ಪಕ್ಕದಲ್ಲಿದ್ದವರ ಬಳಿ ಸಮಯವೆಷ್ಟಾಯಿತೆ೦ದು ಕೇಳೋಣವೆಂದರೆ, ಪಕ್ಕದಲ್ಲಿ ಕುಳಿತಿದ್ದಾತ ಚೆನ್ನಾಗಿ ಗೊರಕೆ ಹೊಡೆಯುತ್ತಿದ್ದ.  'ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ' ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲವೆನಿಸಿತು. ಹಿಂದಕ್ಕೆ ತಿರುಗಿದರೆ, ಹಿಂದಿನ ಸೀಟಿನಲ್ಲಿ ಕುಳಿತಿದ್ದವರು ಬಹುಶಃ ಸಂಬಂಧಿಕರಿರಬೇಕು, ಆರಾಮವಾಗಿ ಹರಟೆ ಹೊಡೆಯುತ್ತಿದ್ದರು. ಅಸೂಯೆಯಾಯಿತು ಅವರನ್ನು ನೋಡಿ, ತಾನು ಅಷ್ಟು ಆರಾಮವಾಗಿ ಹರಟೆ ಹೊಡೆಯಲಾರೆನಲ್ಲಾ ಎಂದು. ಯಾಕೆಂದರೆ ಸೃಷ್ಟಿಯದು ಯಾಂತ್ರಿಕ ಜೀವನ. ಬೆಳಗ್ಗೆ ಎದ್ದು ಆಫೀಸಿಗೆ ಹೋಗಬೇಕು, ಆಫೀಸಿನಲ್ಲಿ ಕತ್ತೆಯಂತೆ ದುಡಿಯಬೇಕು, ಬಾಸಿನ ಬೈಗುಳ ತಿನ್ನಬೇಕು, ಸಂಜೆ ಮನೆಗೆ ಬರಬೇಕು, ಮತ್ತದೇ ಅಡಿಗೆ ಕೆಲಸ. ನಂತರ ಮಲಗಿ, ಬೆಳಗಾದರೆ ಎದ್ದು, ಮತ್ತದೇ ಪುನರಾವರ್ತನೆ. ದೊಡ್ಡ ನಿಟ್ಟುಸಿರೊಂದನ್ನು ಬಿಟ್ಟಳು. ಆಗಲೇ ಇಳಿಯಬೇಕಾದ ಬಸ್ ಸ್ಟಾಪ್ ಬಂದಿದ್ದರಿಂದ ಅವರಲ್ಲಿ ಸಮಯ ಎಷ್ಟಾಯಿತೆ೦ದು ಕೇಳಲು ಹೋಗದೆ ಬಸ್ಸಿನಿಂದ ಇಳಿದಳು. ಇನ್ನು ಆಫೀಸಿಗೆ ಹೋಗಿ ಬಾಸಿನ ಬೈಗುಳ ತಿನ್ನಬೇಕಲ್ಲಾ ಎಂದು ವ್ಯಥೆಯಾಯಿತು. ಆದರೂ ಬೇರೆ ದಾರಿಯಿಲ್ಲವೆಂದುಕೊಂಡು ಕಾಲೆಳೆದುಕೊಂಡು ಆಫೀಸಿಗೆ ನಡೆದಳು. 

ಆಫೀಸ್ ಪ್ರವೇಶಿಸುತ್ತಿದ್ದಂತೆ ಅನುಮಾನ ಕಾಡಿತು, ತಾನು ನಿಜವಾಗಿಯೂ ಅದೇ ಆಫೀಸಿಗೆ ಬಂದಿದ್ದೇನೆಯೇ ಎಂದು. ಯಾಕೆಂದರೆ ಅಲ್ಲಿ ಸಂಪೂರ್ಣ ಮೌನ, ಯಾವುದೇ ಶಬ್ದ ಕೇಳಿಬರಲಿಲ್ಲ. ತಪ್ಪಿ ಬಂದೆನೇ? ಎಂದು ಯೋಚಿಸುತ್ತಿದ್ದಂತೆ ಒಳಗೆ ಒಂದು ಮೂಲೆಯಲ್ಲಿ ಕುಳಿತಿದ್ದ ಗೂರ್ಖ ಕಾಣಿಸಿದ. ಹಾಗಾದರೆ ತಾನಿಲ್ಲಿಗೆ ತಪ್ಪಿ ಬಂದಿಲ್ಲ, ಸರಿಯಾದ ಸ್ಥಳಕ್ಕೇ ಬಂದಿದ್ದೇನೆ ಎಂದುಕೊಂಡು ಒಳಗೆಬಂದರೆ ಏನಾಶ್ಚರ್ಯ! ಒಳಗೆ ಗೂರ್ಖನನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ತನಗೆ ಗೊತ್ತಿಲ್ಲದಂತೆ ಸ್ಟ್ರೈಕ್ ಏನಾದರೂ? ಹೇಗೂ ಎರಡು ವರ್ಷಗಳಿಂದೀಚೆಗೆ ಯಾರಿಗೂ ಸಂಬಳ ಜಾಸ್ತಿ ಮಾಡಿಲ್ಲ. ಗೂರ್ಖನನ್ನು ಕೇಳೋಣವೆಂದು ತಿರುಗಿದರೆ, ಅವನು ಅವಳನ್ನೇ ವಿಚಿತ್ರವೆನ್ನುವಂತೆ ನೋಡುತ್ತಿದ್ದುದನ್ನು ಕಂಡು ಇನ್ನಷ್ಟು ಆಶ್ಚರ್ಯಪಟ್ಟಳು. ಗೂರ್ಖ ಕೇಳಿದ, "ಏನಮ್ಮ, ಇವತ್ತು ಇಷ್ಟು ಬೇಗ ಬಂದಿದ್ದೀರಿ? ಇಲ್ಲದಿದ್ದರೆ ಬಾಸಿನ ಆಶೀರ್ವಾದ(?) ಕೇಳದೆ ನೀವು ಬೇರೆ ಕೆಲಸ ಹಚ್ಕೊಳಲ್ಲವಲ್ಲ? ಏನಮ್ಮ, ಇವತ್ತು ಸೂರ್ಯ ಪಶ್ಚಿಮದಿಂದ ಉದಯಿಸಿದಾನೇನಮ್ಮಾ? ಅಥವಾ ನಾನೇನಾದರೂ ಕನಸು ಕಾಣುತ್ತಿದ್ದೇನಾ?" ಒಬ್ಬ ಸಾಮಾನ್ಯ ಗೂರ್ಖನೂ ನನ್ನನ್ನು ಪ್ರಶ್ನಿಸುವಂತಾಯಿತಲ್ಲ ಮನಸ್ಸಿನ ಒಂದು ಕಡೆಯಲ್ಲಿ ದುಃಖವಾದರೆ,ಇನ್ನೊಂದು ಕಡೆ, ಇದೆಲ್ಲ ಹೇಗಾಯಿತು? ಎನ್ನುವ ಆಶ್ಚರ್ಯ. 'ದ್ವಂದ್ವ ಪರಿಸ್ಥಿತಿ' ಎಂದರೇನೆಂದು ಈಗ ಅರ್ಥವಾಯಿತು ಅವಳಿಗೆ. 

ಆಫೀಸಿನ ಗೋಡೆ ಗಡಿಯಾರದ ಕಡೆ ನೋಡಿದಾಗ, ಬರೀ 08:00 ಆಗಿತ್ತಷ್ಟೆ. ಸುಮ್ಮನೆ ಗಡಿಬಿಡಿ ಮಾಡಿಬಿಟ್ಟೆ. ಮನೆಯ ಹಾಲ್ ನ ಗಡಿಯಾರ ಸರಿಯಿರಲಿಲ್ಲವೆಂದು ಅನಿಸಿತವಳಿಗೆ. ಇನ್ನು ಉಳಿದ ಸಹೋದ್ಯೋಗಿಗಳೆಲ್ಲಾ ಈಗ ಹೇಗೆ ಪ್ರತಿಕ್ರಿಯಿಸಬಹುದೆನ್ನುವ ಕಾತರದಿಂದಲೇ ಸಂತೋಷದಿಂದ ಅವಳ ಮುಖ ಊರಗಲವಾಯಿತು. ಎಲ್ಲಕ್ಕಿಂತಾ ಹೆಚ್ಚಾಗಿ, ಇವತ್ತಾದರೂ ಬಾಸಿನ ಬಾಯ ಬೈಗುಳದಿಂದ ತಪ್ಪಿಸಿಕೊಂಡು, ಹೊಗಳಿಸಿಕೊಳ್ಳಬಹುದಲ್ಲಾ ಎಂದು ಅತಿಯಾದ ಸಂತೋಷದಿಂದ ಹಕ್ಕಿಯಂತೆ ಹಾರಾಡಿದಳು.


-ಮೆಹನಾzzz

Friday, May 27, 2016

ಕನಸು

ಅದೆಲ್ಲೋ  ಕಳೆದು ಹೋಯಿತು, ಆ ಸುಂದರ ಕನಸು
ನೆನೆವೆಯೆಂದರೂ ನೆನಪಾಗಲೊಲ್ಲದು.
ಕೆಲ ಕನಸುಗಳೇ ಹಾಗೆ, ಅವು ಕೇವಲ ಕನಸುಗಳು
ಏನೆಂದರೂ ನನಸಾಗಲೊಲ್ಲವು.

ಮೆಹನಾzzz 

Thursday, May 26, 2016

ಕಣ್ಣು

ನನ್ನ ಜೀವವೇ ಬಂದು ನನ್ನ ಕಣ್ಣಲ್ಲಿ ಕಣ್ಣ ಬೆರೆತರೂ,
ಹೇಳಲಾರದೆ ಹೋದೆ ನನ್ನ ಪ್ರೀತಿಯಾ...
ಹೇಳದಿದ್ದರೂ ಕಾಣದೆ ಹೋಯಿತೆ ನನ್ನ ಕಣ್ಣಲ್ಲಿ,
ಅದೆಷ್ಟೋ ವರ್ಷ ಬಚ್ಚಿಟ್ಟ ಪ್ರೇಮ, ಇನಿಯಾ???

ಮೆಹನಾzzz


ಸೌಂದರ್ಯ

ಕುರೂಪಿಯಾದರೂ 
ಅವನಿಗವಳೆ 
ರಂಭೆ - ಊರ್ವಶಿ. 
ಯಾಕೆಂದರೆ 
ಅವಳಪ್ಪನ ಬಳಿಯಿದೆ 
ದುಡ್ಡು ರಾಶಿರಾಶಿ!!

-ಮೆಹನಾzzz 


Friday, May 6, 2016

ಕಾತರ

ಹಕ್ಕಿಯ ಇಂಚರ ಆಲಿಸುತ
ಅದರ ಹಿಂದೆ ನಡೆದೆ...
ನಿನ್ನುಸಿರ ದನಿಯ ಕೇಳಿ ನಾ
ಮುನ್ನಡೆಯದೆ ನಿಂತೆ...

ಕುಹೂ ಕುಹೂ ಕೋಗಿಲೆಯ
ನಾ ಅನುಕರಿಸಹೊರಟೆ...
ನಿನ್ನ ಪಿಸುದನಿಯ ಕೇಳಿ ನಾ
ಮೂಕಳಾಗಿ ನಿಂತೆ...

ಅದ್ಯಾವುದೋ ಮಾಯೆ ನನ್ನ ಆವರಿಸಿದೆ...
ನಿನ್ನ ಕಾಣಲು ನನ್ನ ಹೃದಯ ಚಡಪಡಿಸಿದೆ...

ಮುಂಜಾನೆಯ ಸೂರ್ಯನ ಉದಯ
ಕಾಣಲು ನಾ ಕಾತರಿಸಿದೆ...
ಸೂರ್ಯನ ಬದಲು ನೀನೇ ಕಾಣಲು
ನಾಚಿ ನಾ ಕೆಂಪೇರಿದೆ...

ಬೆಳದಿಂಗಳ ಚಂದಿರ ಕಾಣಲು
ಸುಂದರವೇ ತಾನೆ...
ಚಂದಿರನಲ್ಲೂ ನಿನ್ನದೇ ಬಿಂಬ
ಯಾಕೋ ಕಾಣೆ...

ಅದ್ಯಾವುದೋ ಮಾಯೆ ನನ್ನ ಆವರಿಸಿದೆ...
ನಿನ್ನ ಕಾಣಲು ನನ್ನ ಹೃದಯ ಚಡಪಡಿಸಿದೆ...

-ಮೆಹನಾzzz 

Thursday, May 5, 2016

ಆಕರ್ಷಣೆ

ಅವನ ರೂಪ, ಸಧ್ರಡ ಮೈಕಟ್ಟು, ಸ್ಟೈಲ್, ಸ್ಮೈಲ್, ಹೀರೋಯಿಸಂಗೆ ಮನಸೋತು, ಮೆಚ್ಚಿ ಅವನನ್ನು ಕೈ ಹಿಡಿದವಳು ಮದುವೆಯ ನಂತರ ಅವನ ಹಟಮಾರಿತನ, ಅಲೆಮಾರಿತನ, ದುಶ್ಚಟ, ರೌಡಿಸಂಗಳಿಗೆ ಬೇಸತ್ತು ವಿಚ್ಛೇದನೆಗೆ ಅರ್ಜಿ ಹಾಕಿದಳು.

-ಮೆಹನಾzzz 

Tuesday, April 26, 2016

ಕೊರಗು

ಊಟ ತಿಂಡಿ ಬಿಟ್ಟು, ನಿದ್ದೆಯಿಲ್ಲದೆ, ಕೋಣೆಯ ಮೂಲೆಯಲ್ಲಿ ಕುಳಿತು ಅವಳು ತನ್ನ ಪ್ರೇಮವನ್ನು ನಿರಾಕರಿಸಲು ಕಾರಣವೇನೆಂದು ತಿಳಿಯದೆ ಕೊರಗುತ್ತಿದ್ದವನಿಗೆ, ಅದೇ ಮನೆಯ ಇನ್ನೊಂದು ಕೋಣೆಯ ಮೂಲೆಯಲ್ಲಿ ಕುಳಿತು, ಇವನ ಈ ಅವಸ್ಥೆಗೆ ಕಾರಣ ತಿಳಿಯದೆ, ಊಟ ತಿಂಡಿ, ನಿದ್ದೆಯಿಲ್ಲದೆ ಸೊರಗುತ್ತಿದ್ದ ಅವನಮ್ಮನ ಕೊರಗು ಕಾಣಿಸಲೇ ಇಲ್ಲ.

-ಮೆಹನಾzzz 

Monday, April 25, 2016

ಸಮಾನತೆ

ಕಣ್ಣುಗಳು ಅತ್ತು ಅತ್ತು ಊದಿಕೊಂಡಿದ್ದವು. ಇಷ್ಟು ಬೇಗ ಮದುವೆಗೆ ಗಂಡು ಹುಡುಕಿದ್ದಾಳಲ್ಲ, ನಾನೇನು ಅಷ್ಟು ಬೇಗ ಭಾರವಾಗಿ ಹೋದೆನೆ ಹೆತ್ತಮ್ಮನಿಗೆ? ತಾನು ಜೀವನದಲ್ಲಿ ಅನುಭವಿಸಿದ ಕಷ್ಟ-ಕಾರ್ಪಣ್ಯಗಳು ಸಾಲದೆಂಬಂತೆ ನನ್ನ ತಲೆಗೂ ಹೊಸ ನೋವು ಕಟ್ಟಬೇಕೆಂದಿದ್ದಾಳಾ ಅವಳು? ಈಗ ತಾನೆ ಡಿಗ್ರಿ ಮುಗಿಸಿ ತನ್ನ ಕಾಲ ಮೇಲೆ ನಿಲ್ಲುವೆನೆಂಬ ಭರವಸೆಯೊಂದಿಗೆ ಕೆಲಸ ಹುಡುಕಲಾರಂಭಿಸಿದ ನೀತಾಳಿಗೆ ಈಗ ತಾನೇ ಆದ ಘಟನೆ ಮರೆಯಲಾಗುತ್ತಿಲ್ಲ.

ಧೋ ಎಂದು ಸುರಿಯುವ ಮಳೆಗೆ ಒದ್ದೆಯಾಗದಂತೆ ರಕ್ಷಿಸಲು ಕೊಡೆ ನಿಷ್ಪ್ರಯೋಜಕವೆಂದು ಅಲ್ಲೇ ಅದನ್ನು ಬಿಸುಡಿ ರಕ್ಕಸನಂತೆ ಬೆಳೆದಿದ್ದ ಆಲದ ಮರದಡಿ ನಿಂತಿದ್ದಳು ನೀತಾ. ಮಳೆ ಕಡಿಮೆಯಾಗುವ ಸೂಚನೆಯಿರಲಿಲ್ಲ. ಅಸಹನೆಯಿಂದ ಸುರಿಯುವ ಮಳೆಗೆ ಶಾಪ ಹಾಕುತ್ತಿದ್ದವಳ ಬಳಿ ನಿಂತಿತು ಒಂದು ಹಳೆಯ ಸ್ಕೂಟರ್. "ಬನ್ನಿ, ಮನೆ ತನಕ ಬಿಡುತ್ತೀನಿ", ಗಂಡು ದನಿ ಕೇಳಿಸಿತು. ಅತ್ತ ನೋಡಲಿಲ್ಲ ನೀತಾ. ಅವಳಿಗೆ ಗಂಡು ಜಾತಿಯೆಂದರೇನೇ ಅಲರ್ಜಿ. ಅವಳಿಗೆ ನಾಲ್ಕು ವರ್ಷ ಪೂರ್ತಿಯಾಗಿರಲಿಲ್ಲ, ಅವಳಮ್ಮ ಮುದ್ದಾದ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಳು. ಎರಡನೇ ಮಗುವೂ ಹೆಣ್ಣೆಂದು ತಿಳಿದ ಕೂಡಲೇ ಹೆಂಡತಿ ಮಕ್ಕಳನ್ನು ಬಿಟ್ಟು ಅದೆಲ್ಲೋ ಹೊರಟುಹೋಗಿದ್ದ ಮಹಾನುಭಾವನ ಮುಖದ ನೆನಪೂ ಇಲ್ಲ ಅವಳಿಗೆ. ಅವಳಮ್ಮ ಅವರಿವರ ಮನೆ ಮುಸುರೆ ತೊಳೆದು ತನ್ನಿಬ್ಬ ಹೆಣ್ಣುಮಕ್ಕಳನ್ನು ಸಾಕಿದ್ದಳು. ಅಮ್ಮನೆಂದರೆ ಪ್ರೀತಿಗಿಂತ ಜಾಸ್ತಿ ಹೆಮ್ಮೆ ಅವಳಿಗೆ.

 "ನೀತಾ ಅವರೇ, ಮಳೆ ಸಧ್ಯಕ್ಕೆ ನಿಲ್ಲೋದಿಲ್ಲ. ಬನ್ನಿ." ಅದೇ ಗಂಡು ದನಿ. ಎಚ್ಚೆತ್ತು ಒಂದು ಕ್ಷಣ ಅವನನ್ನೇ ದಿಟ್ಟಿಸಿದಳು. ಮುಖ ಸರಿಯಾಗಿ ಕಾಣುತ್ತಿಲ್ಲ. ಹೆಲ್ಮೆಟ್ ಮುಖದ ಮುಕ್ಕಾಲು ಭಾಗ ಮುಚ್ಚಿದೆ. "ಪರವಾಗಿಲ್ಲ, ನಿಮ್ಮ ಕೆಲಸ ನೋಡಿ". ಮುಖ ಗಂಟಿಕ್ಕಿಯೇ ಹೇಳಿದಳು. "ನಿಮ್ಮ ಮನೆಯಿಂದಲೇ ಬರ್ತಾ ಇದ್ದೀನಿ. ನಿಮ್ಮಮ್ಮ ನೀವು ಮನೆಯಲ್ಲಿ ಇಲ್ಲ ಅಂದರು. ಹಾಗೇ ಹುಡುಕ್ಕೊಂಡು ಬಂದೆ."
ನೀತಳಿಗೆ ಶಾಕ್.  "ಯಾರು ನೀವು? ನಮ್ಮ ಮನೆಗೆ ಯಾಕೆ ಹೋಗಿದ್ರಿ? ನನಗೇನೂ ಅರ್ಥ ಆಗ್ತಾ ಇಲ್ಲ."
"ನಾನು ಅರ್ಜುನ್. ನಿಮ್ಮಮ್ಮ ಎನೂ ಹೇಳಿಲ್ವ ನನ್ನ ಬಗ್ಗೆ? ನನ್ನ ಬಗ್ಗೆ ನಾನೇ ಹೇಳಿಕೊಳ್ಳೋದಕ್ಕಿಂತ ನೀವು ನಿಮ್ಮಮ್ಮನ್ನ ಕೇಳೋದೇ ಚೆನ್ನ. ನಾನಂತೂ ನಿಮ್ಮ ಫೋಟೋ ನೋಡುತ್ತಲೇ ಮದುವೆಗೆ ಒಪ್ಕೊಂಡು ಬಿಟ್ಟೆ."
ಶಾಕ್ ಮೇಲೆ ಶಾಕ್ ಅವಳಿಗೆ. ತನ್ನ ಕಿವಿಗಳನ್ನು ನಂಬಲಾಗುತ್ತಿಲ್ಲ. ತನಗೆ ಮದುವೆ? ಈತನ ಜೊತೆ? ಆಶ್ಚರ್ಯ! ಕೋಪ! ದುಃಖ! ಕಣ್ಣುಗಳು ಕೆಂಪಡರಿದವು. ಪುನಃ ಅವನ ಕಡೆ ನೋಡದೆ ಆ ಮಳೆಯಲ್ಲೇ ನೆನೆದುಕೊಂಡು ಮನೆಗೆ ಬಂದಿದ್ದಳು. ಹರಿಯುತ್ತಿರುವ ಕಣ್ಣೀರಧಾರೆಯನ್ನು ಒರೆಸಲೂ ಸಮಯವಿಲ್ಲದಂತೆ ಚಿಂತಿಸುತ್ತಿದ್ದಳು. ತನ್ನ ಗಂಡ ತನಗೆ ಮೋಸ ಮಾಡಿ ಒಂಟಿಯಾಗಿ ತನ್ನೆರಡು ಹೆಣ್ಣುಮಕ್ಕಳ ಜೊತೆ ಬಿಟ್ಟುಹೋಗಿದ್ದರೂ ಒಂದೇ ಒಂದು ಸಲ ಅವನ ಬಗ್ಗೆ ಒಳ್ಳೆಯದಾಗಲಿ, ಕೆಟ್ಟದ್ದಾಗಲಿ, ಅಮ್ಮ ಮಾತನಾಡಿಲ್ಲ. ತಿಳಿದದ್ದೆಲ್ಲ ಬೇರೆಯವರ ಮುಖಾಂತರವೇ ಮತ್ತೆ ಅಲ್ಪ ಸ್ವಲ್ಪ ನೆನಪುಗಳು. ಗಂಡ ಬಿಟ್ಟು  ನಂತರ ಯಾವುದೇ ಗಂಡಸಿನ ಹಂಗಿಲ್ಲದೆ ಗಂಡಸಿಗೆ ಸಮನಾಗಿ ಕೂಲಿ ಕೆಲಸ ಮಾಡಿ, ಉಳಿದ ಸಮಯದಲ್ಲಿ ಅಕ್ಕಪಕ್ಕದ ಮನೆಯವರ ಕಸಮುಸುರೆ ತಿಕ್ಕಿ ತನ್ನ ಮಕ್ಕಳ ಹೊಟ್ಟೆ ತುಂಬಿಸಿದ್ದಳು.
(ಇನ್ನೂ ಇದೆ)


-ಮೆಹನಾzzz 

ಬರಹ

ನಾ ಬರೆಯುವೆ...
ಬೆರಳು ನೋಯುತಿದ್ದರೂ,
ಈ ಪೆನ್ನಿನ ಜೀವ ಮುಗಿದರೂ,
ಹಗಲು ಮುಗಿದು ಇರುಳಾದರೂ,

ನಾ ಬರೆಯುವೆ... 
ನಿನ್ನಿರವು ಕಾಣದಾದರೂ,
ಕನಸೆಲ್ಲ ಬತ್ತಿ ಹೋದರೂ,
ನನ್ನುಸಿರೇ ನಿಂತು ಬಿಟ್ಟರೂ,

ನಾ ಬರೆಯುವೆ... 
ನೀ ಬರುವ ಆಕಾಂಕ್ಷೆಯೊಂದಿಗೆ,
ನಿನ್ನ ಸೇರುವ ಹಂಬಲದೊಂದಿಗೆ,
ನನ್ನ ಪ್ರತಿ ಬರಹವೂ ಕಾಣಿಕೆ ನಿನಗೆ. 

-ಮೆಹನಾzzz 

Tuesday, April 5, 2016

ಮುಂಜಾನೆ

ನಸು ಮುಂಜಾನೆಯ ಬಾನಲ್ಲಿ ಚಿತ್ತಾರ ಮೂಡಿದೆ
ಒಂದು ಹೊಸ ಬೆಳಗನ್ನು ಸ್ವಾಗತಿಸಲು.
ಅದು ತಾನೇ ಮದುಮಗಳಂತೆ ಕಂಗೊಳಿಸಿದೆ
ಕಲಾವಿದನ ಕುಂಚಗಳಿಗೆ ಬಣ್ಣವ ತುಂಬಿಸಲು.

-ಮೆಹನಾzzz 

ನೋವು

ಯಾಕೋ ಏನೋ ಅದೇನೋ ನೋವು ಹೃದಯ ತುಂಬೆಲ್ಲ
ನೀನೆಂದೆಂದು  ನನ್ನವನಾದರೂ ನನ್ನ ಬಳಿಯಿಲ್ಲ
ನಿನ್ನ ಕಾಣದ ನಿಮಿಷಗಳು ವರುಷಗಳಂತೆ ಕಾಡಿವೆ
ನೀ ಬರುವ ಹಾದಿಯ ಕಾದು ನಾ ಸೋತುಹೋಗಿರುವೆ

-ಮೆಹನಾzzz 

Friday, April 1, 2016

ವಿಪರ್ಯಾಸ

ಠಣ್ಣೆಂದು ನಾಣ್ಯವೊಂದು ತಟ್ಟೆಗೆ ಬಂದು ಬೀಳಲು  ಆ ಭಿಕ್ಷುಕ ಮತ್ತೊಮ್ಮೆ ಎಣಿಸಲಾರಂಭಿಸಿದ. ಒಂದು.. ಎರಡು.. ಒಂದು ರೂಪಾಯಿಯ ಒಟ್ಟು ಹತ್ತು ನಾಣ್ಯಗಳು! ಅಬ್ಬ.. ಇನ್ನೊಂದು ಐದು ರೂಪಾಯಿ ಸಿಕ್ಕರೆ ಜ್ವರದಿಂದ ಮಲಗಿರುವ ಮಗನಿಗೆ ಔಷಧಿ ತರಬಹುದು ಎನ್ನುವ ಯೋಚನೆಯೇ ಮಂದಹಾಸ ತರಿಸಿತು ಕೃಶ ಶರೀರದ ಆತನ  ಕಪ್ಪು ತುಟಿಗಳಲ್ಲಿ. ಆಗಲೇ ಪಕ್ಕದಂಗಡಿಯಿಂದ ಬಂದ ಹತ್ತು ರೂಪಾಯಿಯಿಗೆ ದೊರೆಯುವ ತೊಟ್ಟೆ ಸಾರಾಯಿಯ ವಾಸನೆ ಅವನ ಮೂಗರಳಿಸಿದವು.
ಒಂದಷ್ಟು ಯೋಚಿಸಿದ ಆತ. ಹತ್ತು ರೂಪಾಯಿ ತಾನೇ, ಇನ್ನೊಂದು ಸಲ ಒಟ್ಟುಗೂಡಿಸಬಹುದೆಂದುಕೊಳ್ಳುತ್ತಾ ಪಂಚೆ ಸರಿಪಡಿಸಿಕೊಂಡು ಸೀದಾ ಸಾರಾಯಿ ಅಂಗಡಿಯತ್ತ ನಡೆದೇಬಿಟ್ಟ!

-ಮೆಹನಾzzz 

Wednesday, March 30, 2016

ದಾನಿ

ಅವನೊಬ್ಬ ಆಗರ್ಭ ಶ್ರೀಮಂತ. ಎಣಿಸಲಾರದಷ್ಟು ಆಸ್ತಿ ಅಂತಸ್ತು,  ಎಷ್ಟು ಕೊಟ್ಟರೂ ಮುಗಿಯದಷ್ಟು ಸಂಪತ್ತು. ನಗರದ ಎಷ್ಟೋ ಬ್ಯುಸಿನೆಸ್ಮೆನ್ಗಳಿಗೆ ಈತನೇ ಗಾಡ್-ಫಾದರ್. ಅದೆಷ್ಟೋ ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ಕೊಡುಗೈದಾನಿ. ನಿಯತಕಾಲಿಕವೊಂದರಲ್ಲಿ ತನ್ನನ್ನು ದಾನಶೂರ ಕರ್ಣನೆಂದು ಬಿಂಬಿಸಿದ ಅಂಕಣವೊಂದನ್ನು ಮಂದಸ್ಮಿತನಾಗಿ ಹೆಮ್ಮೆಯಿಂದ ಓದುತ್ತಿದ್ದಾಗಲೇ ಕರೆಗಂಟೆಯ ಸದ್ದಾಯಿತು. ಯಾರೆಂದು ನೋಡಿದರೆ ಹಸಿದು ಬೆಂಡಾದ ಹಣ್ಣು ಹಣ್ಣು ಮುದುಕಿ. ಇವಳಿಗೆ ಕೊಟ್ಟರೆ ತನಗೇನೂ ಹೆಸರು ಬರದೆಂದರಿತ ಶ್ರೀಮಂತ ಅವಳನ್ನು ಹಾಗೆಯೇ ಮುಂದೆ ಸಾಗಹಾಕಿದ.

-ಮೆಹನಾzzz 

Tuesday, March 29, 2016

ಚಂದಿರ

ನೀಲಾಕಾಶದಲ್ಲಿ ಚಂದಿರನ ಕಂಡೊಡನೆ ಯಾಕೋ ನಿನ್ನೇ ಕಂಡಂತಾಯಿತು ನನಗೆ. ದೂರ ನಿಂತು ಮುಗುಳ್ನಗಲು, ನಿನ್ನ ತಂಪನೆಯ ನೆನಪು ಮಾಯದಂತೆ ಕಾಪಿಡಲು ಮಾತ್ರ ಗೊತ್ತು ನಿನಗೆ. ಬಳಿ ಬಂದು ನಿನ್ನ ತೋಳಿನಲ್ಲಿ ನನ್ನನ್ನು ಬಂಧಿಸಿ ಹಣೆಗೆ ಯಾವಾಗ ಮುತ್ತಿಕ್ಕುವೆಯೋ ಎಂದು ಕಾದು ಕುಳಿತಿರುವೆ ಗೆಳೆಯ. ನೀ ದೂರದ ಚಂದಿರನಾಗಬೇಡ.  ನನ್ನ ಮುದ್ದಿನ ಇನಿಯನಾಗಿ ನನ್ನ ಜೊತೆಯಲ್ಲೇ ಇರು. ಪ್ಲೀಸ್ ಕಣೋ..

-ಮೆಹನಾzzz 

Sunday, March 20, 2016

ಕಳ್ಳ

ಅವ ಅನ್ನುತ್ತಿದ್ದ ಅವಳ ಕಂಡೊಡನೆ,
ನೀನೇ ನನ್ನ ಬಂಗಾರಿ, ನನ್ನ ಚಿನ್ನಾರಿ..
ಈಗ ಅವಳ ಧನ-ಕನಕ ಸಿಕ್ಕೊಡನೆ,
ದೋಚಿ ಆಗಿರುವನು ಪರಾರಿ.

-ಮೆಹನಾzzz 

Tuesday, March 15, 2016

ಪತಿಯ ಪಿಸುದನಿ

ನನ್ನೊಡತಿ ಚೆಲುವೆ ಚಾರು..
ನಿನಗೇಕೆ ಒಡವೆ ಕಾರು?
ನಾ ನಿನಗೊಡವೆ ನೀ ನನಗೊಡವೆ
ನಮಗಿಬ್ಬರಿಗೂ ಬೇಡ ಒಡವೆ ಕಾರುಗಳ ಗೊಡವೆ.

-ಮೆಹನಾzzz 

Sunday, March 13, 2016

ನಿನ್ನ ನೆನಪು

ಮೊದಲ ಮಳೆಯ ಹನಿಯ ತಂಪು..
ಮಾಮರದ ಕೋಗಿಲೆಯ ದನಿಯ ಇಂಪು..
ಮಳೆ ಹನಿಗೆ  ಬಿರಿದ ಮಲ್ಲಿಗೆಯ ಕಂಪು..
ತಂದಿತು ನನಗೆ ನಿನ್ನದೇ ನೆನಪು.

-ಮೆಹನಾzzz 

Thursday, March 10, 2016

ಕಾಯುತಿರುವೆ ನಿನಗಾಗಿ

ನಿನ್ನ ಕಂಗಳಲ್ಲೇನೋ ಮೋಡಿಯಿದೆ.
ಎಷ್ಟು ನೋಡಿದರೂ ತೀರದ ದಾಹವಿದೆ.
ನಿನಗಾಗಿ ನಾ ಜನುಮಗಳೇ ಕಾದೆ.
ನಿನ್ನ ಕಾಣದೆ ನಾ ಬಳಲಿದೆ.. ಸೋತುಹೋದೆ..

-ಮೆಹನಾzzz 

Tuesday, March 8, 2016

ಆಸೆ


ನಿನ್ನ ಹೃದಯದ ಮೂಲೆಯಲ್ಲಿ ಬಚ್ಚಿಟ್ಟುಕೊಂಡು
ಹೊಸ ಕವನ ಬರೆಯುವಾಸೆ ನನಗೆ..
ನನ್ನ ಬಾಹುಗಳಲ್ಲಿ ನಿನ್ನ ಮುಚ್ಚಿಟ್ಟುಕೊಂಡು
ಹೊಸ ಕನಸ ಹೆಣೆಯುವಾಸೆ ನನಗೆ..

-ಮೆಹನಾzzz 

Miss you..

ತಂಪಾದ ಗಾಳಿ ಬೀಸುತ್ತಿರುವಾಗ
ಯಾಕೋ ನನ್ನೇ ನಾ ಮರೆತುಹೋದೆ.
ಕೆನ್ನೆ ಕೆಂಪಾಯಿತು,
ಹೊಟ್ಟೆಯಲ್ಲಿ ಅದೇಕೋ ಚಿಟ್ಟೆಗಳೋಡಾಡಿದಂತೆ,
ಕಚಗುಳಿಯ ಚಿಲಿಪಿಲಿ.
ಮಳೆ ಯಾವೊಂದು ಸುಳಿವೇ ಕೊಡದೆ
ಜೋರಾಗಿ ಸುರಿಯಲಾರಂಭಿಸಿತು.
ನೀನೇ ಎದುರು ಬಂದಂತೆ,
ನನ್ನ ಕಣ್ಣಲ್ಲಿ ಕಣ್ಣಿಟ್ಟು ನಿಂತಂತೆ..
ಮಳೆಗೆ ಇಬ್ಬರೂ ಒದ್ದೆಯಾಗುತ್ತಿರುವ ಪರಿವೆಯೇ ಇಲ್ಲದೆ
ನನ್ನ ನೀನು, ನಿನ್ನ ನಾನು ನೋಡುತ್ತಿರುವಂತೆ..
ನಾಚಿ ತಲೆತಗ್ಗಿಸಿದೆ..
ನಿನ್ನ ತೋರುಬೆರಳ ತುದಿಯಿಂದ,
ನನ್ನ ಗಲ್ಲವೆತ್ತಿದಂತಾಯಿತು..
ನಿನ್ನ ಸ್ಪರ್ಶದಲ್ಲೆಂಥದೋ ತಿಳಿಯದ ಮಾಯೆ..
ಆಗಸದಲ್ಲಿನ ಆ ಮಿಣಕು ನಕ್ಷತ್ರಗಳ ಮಧ್ಯದಲ್ಲಿ,
ನೀನೇ ಚಂದಿರನಾಗಿ ಮುಗುಳ್ನಕ್ಕಂತೆ,
ಬೆಳದಿಂಗಳಾಗಿ ನನ್ನ ಮೆಲ್ಲ ಸೋಕಿದಂತೆ,
ಮೈಯೆಲ್ಲಾ ರೋಮಾಂಚನ.
ನೀ ಬಳಿಯಿಲ್ಲದಿದ್ದರೂ,
ನಿನ್ನಿರವು ನನ್ನಾತ್ಮದ ಇಂಚಿಚಲೂ
ಜೀವಂತವಾಗಿದೆ ಗೆಳೆಯ,
ಅದೆಷ್ಟೆಂದು ಸತಾಯಿಸುವೆ ನನ್ನ?
ಕನಸಾಗಿ ಕಾಡಿಸುವ ಬದಲು
ಬಳಿಬಂದು ನಿನ್ನ ತೋಳಿನಲ್ಲಿ ಬಂಧಿಸಬಾರದೆ
ಇನ್ನಾದರೂ?
-ಮೆಹನಾzzz 

ಹೊಸ ಜನ್ಮ

ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು ಗೆಳೆಯಾ..
ಕಾಣಿಸಬಹುದೇನೋ ನಾ ತೀರ ಹೊಸದಾಗಿ..

ಉಳಿದಿಲ್ಲ ನಾನಿನ್ನೂ ನಿನ್ನ ಗೆಳತಿಯಾಗಿ,
ಬದಲಾಗಿರುವೆ ಈಗ ನಿನ್ನ ಪ್ರೇಮಿಯಾಗಿ..

-ಮೆಹನಾzzz 

Friday, March 4, 2016

ಏಕಾಂಗಿ


ವಿರಹದ ತಾಪ ತನುಮನ ಸುಡುತಿರಲು..
ಹೇಗಿರಲಿ ಗೆಳೆಯ ನಾ ನಿಶ್ಚಿಂತಳಾಗಿ?
ಪುನಹ ಜೊತೆಯಾಗುವ ಹಂಬಲ ಜೊತೆಗಿರಲು..
ಕಾಯುತಿರುವೆ ನಾ ಏಕಾಂಗಿಯಾಗಿ..

-ಮೆಹನಾzzz 

Wednesday, March 2, 2016

ಕಣ್ಣ ಬಿಂಬ

ಓ ಗೆಳೆಯನೇ ನಿನ್ನ
ನಾ ನೋಡಿದಾಗಿನಿಂದ..
ನಿನ್ನದೇ ಬಿಂಬ
ನನ್ನ ಕಣ್ಣ ತುಂಬ..

-ಮೆಹನಾzzz 

Tuesday, March 1, 2016

ಮರಳಿ ಬಾ

ನಿನ್ನ ಪ್ರತಿ ಮಾತು ನನಗಾಪ್ತ,
ನಿನ್ನ ಹೃದಯ ನನ್ನ ಸ್ವಂತ,
ನೀನಿಲ್ಲದೆ ನನಗುಳಿವಿಲ್ಲ,
ಮರಳಿ ಬಾ ಓ ಗೆಳೆಯ..

-ಮೆಹನಾzzz 

ನೀನು

ನೀನಿರಲು ಬಳಿ ನನ್ನ ಜೀವನ ಪಾವನ..
ನೀನಿಲ್ಲದಿರೆ ಸಂಕಟ ಪ್ರತಿಕ್ಷಣ ಪ್ರತಿದಿನ...
ನಿನ್ನ ಸ್ಪರ್ಶವೇ ನನ್ನ ನೋವುಗಳಿಗೆಲ್ಲಾ ಶಮನ..
ನಿನ್ನ ಕೊಟ್ಟ ದೇವರಿಗೆ ನನ್ನ ಕೋಟಿ ನಮನ..

-ಮೆಹನಾzzz 

ಹೊಸ ಕವನ..

ಆದಂದಿನಿಂದ ನಮ್ಮಿಬ್ಬರ
ಆತ್ಮಗಳ ಮೊದಲ ಮಿಲನ..
ಬರೆಯಲಾರಂಭಿಸಿದೆ ಈ ಹೃದಯ
ದಿನವೂ ಹೊಸತೊಂದು ಕವನ..

-ಮೆಹನಾzzz 

ಜೇನು

ನಿನ್ನ ಮಾತುಗಳೆಂದರೆ ನನಗೆ
ಬೆಲ್ಲಕ್ಕೆ ಅಂಟಿದ ಜೇನು..
ನಿನ್ನ ಮೌನ ಸಹಿಸಲಾರೆ,
ತಿಳಿದಿಲ್ಲವೇ ನಿನಗಿನ್ನೂ?

-ಮೆಹನಾzzz 

Monday, February 29, 2016

ಯಾಕೆ ಮಾಯವಾದೆ?

ಅದ್ಯಾವುದೋ ಮಧುರ ಕ್ಷಣವೊಂದು ನೆನಪಾಗಿ
ಅದನ್ನಿನ್ನೂ ಆಸ್ವಾದಿಸಲು ಕಣ್ಣು ಮುಚ್ಚಿ ಸೀಟಿಗೆ
ತಲೆಯಾನಿಸಿದೆ.
ಅದೆಲ್ಲಿದ್ದೆಯೋ ನೀನು, ಬಳಿ ಬಂದು
ನನ್ನ ಹಣೆಗೆ ಮುತ್ತಿಟ್ಟೆ.
ಆದರೆ ನಾನು ಕಣ್ಣು
ತೆರೆಯುವಷ್ಟರಲ್ಲಿ ಅದ್ಯಾಕೆ ಮಾಯವಾದೆ?

-ಮೆಹನಾzzz 

ಜೋಡಿ

ಅವತ್ತೊಂದು ದಿನ ಹೀಗೇ ಬಸ್ಸಲ್ಲಿ ಪ್ರಯಾಣಿಸುತಿದ್ದಾಗ ಅಕಸ್ಮಾತಾಗಿ ಒಂದು ಹುಡುಗನನ್ನು ನೋಡಿದೆ. ಅಯ್ಯೋ.. ಅಂತದ್ದೇನಿಲ್ಲ ಮಾರಾಯ್ರೆ. ತಪ್ಪು ತಿಳ್ಕೋಬೇಡಿ. ಜಸ್ಟ್ ನೋಡಿದೆ ಅಷ್ಟೇ. ಗಲೀಜು ಗಲೀಜಾಗಿ, ಅದೆಷ್ಟೋ ವರ್ಷಗಳಿಂದ ಸ್ನಾನ ಮಾಡದವನಂತಿದ್ದ. ಆದರೂ ಸ್ಟೈಲಿಗೇನು ಕಮ್ಮಿಗಿಲ್ಲ. Shah Rukh Khan ನಂತೆ ತುದಿಯ ಕೂದಲಿಗೆ ಜುಟ್ಟು ಕಟ್ಟಿ, ವಿಚಿತ್ರವಾಗಿ ಆ ಕೊಳಕು ಶರ್ಟಿನ ಕಾಲರ್ ಎತ್ತಿ ಪೋಸ್ ಕೊಡುತ್ತಿದ್ದ. ಈ ಹುಡುಗ ಹೋಗಿ ಯಾವಳಾದರೂ rich, beautiful ಹುಡುಗಿಗೆ " I love you " ಎಂದರೆ ಆ ಹುಡುಗಿ ಹೀಗೆ ರಿಪ್ಲೈ ಮಾಡಬಹುದೇನೋ ಎಂದೆನಿಸಿತು ನನಗೆ.

"
ನಿನ್ನದು ಶರ್ಟಿನ dirty collar.
ನನ್ನದು clean & tidy salwar.
ಆದೀತೇ ನಮ್ಮ ಜೋಡಿ super?

ನನ್ನ face pure white in color.
ನಿನ್ನ face ನೋಡಿದ್ರೇನೇ horror.
ಆದೀತೇ ನಮ್ಮ ಜೋಡಿ super?

ನಾನು ನಿನಗಿಂತ ತುಂಬಾ taller.
ನೀನು ನನ್ನ ಮುಂದೆ ಇನ್ನೂ shorter.
ಆದೀತೇ ನಮ್ಮ ಜೋಡಿ super?

ನಾನು ಕರಾಟೆಯಲಿ ever winner.
ನೀನು ಸಣಕಲು poor ಪಾಪರ್.
ಆದೀತೇ ನಮ್ಮ ಜೋಡಿ super?

ನನ್ನ dad ದೊಡ್ಡ bunglaw owner.
ನಿನ್ನ ಬಳಿಯಿದೆ only ಚಿಲ್ಲರ್.
ಆದೀತೇ ನಮ್ಮ ಜೋಡಿ super?

ನಾನೋಡಿಸುವುದು BMW car.
ನಿನ್ನಲ್ಲೇನಿಲ್ಲ ನೀ ತುಂಬಾ ಬೋರ್.
ಆಗದು ನಮ್ಮ ಜೋಡಿ super !!
"

:) ಸೀರಿಯಸ್ ಆಗಿ ತಗೋಬೇಡಿ. Just for fun ಅಷ್ಟೇ.

-ಮೆಹನಾzzz 

ನೆನಪು


"ಗೆಳತಿಗಿಂತ ಜಾಸ್ತಿ ಪ್ರೇಯಸಿಗಿಂತ ಕಮ್ಮಿ".

ನನ್ನ ಬಗ್ಗೆ ಯಾವಾಗ ಕೇಳಿದರೂ ಹೀಗೇ ಅಲ್ಲವೇ ನೀ ಅನ್ನುತಿದ್ಧುದು. ಜಾಣ ನೀನು. ನಾನೇ ಪೆದ್ದಿ, ನಾ ನಿನ್ನ ಗೆಳತಿ ಮಾತ್ರ, ಅದ್ಯಾವಳೋ ಮಾಟಗಾತಿ ನಿನ್ನ ಹೃದಯ ಕದ್ದಿದ್ದಾಳೆಂದೇ ತಿಳಿದಿದ್ದೆ. ನಿನ್ನ ಬಗ್ಗೆ ಆಕರ್ಷಣೆ ಅಷ್ಟೇನೂ ಇರಲಿಲ್ಲ. ಆದರೂ ನೀ ಅವಳ ಬಗ್ಗೆ ವರ್ಣಿಸುವಾಗ, ಅವಳ ಅಂದ- ಚಂದ, ಹಾವ ಭಾವ, ಅವಳ ಮುಗ್ಧ ಮನಸ್ಸು.. ಅಯ್ಯೋ, ಈ ಹುಡುಗ ಪ್ರೀತಿಯಲ್ಲಿ ಹುಚ್ಚನಾಗಿಬಿಟ್ಟಿರುವನೇನೋ ಎಂದೆನಿಸುತಿತ್ತು. ಎಲ್ಲೋ ಮನದಂಗಳಲ್ಲಿ ಆ ಹುಡುಗಿ ನಾನೇ ಆಗಿರಬಾರದಿತ್ತೇ? ಅನ್ನುವ ಅಸೂಯೆ.. ಇಲ್ಲಾ, ಈ ಥರ ಹುಚ್ಚನಂತೆ ಪ್ರೀತಿಸುವ ಹುಡುಗ ನನಗೂ ಸಿಗುವನೇ ಎಂಬ ಆಸೆ.. ಒಟ್ಟಿನಲ್ಲಿ ಬರಡಾಗಿದ್ದ ನನ್ನ ಹೃದಯದಲ್ಲೂ ಪ್ರೀತಿಯ ಮೊಳಕೆ ಹುಟ್ಟಿಸಿದವನು ನೀನೇ ಕಣೋ.

ಆ ಹುಡುಗಿ ಯಾರೆಂದುಎಷ್ಟೇ ಕೇಳಿದರೂ ಬಾಯಿ ಬಿಡದ ನೀನು, "ನಿನಗೆ ತಿಳಿದವಳೇ" ಎಂದು ಭುಜ ಕುಣಿಸಿ ಹೋಗುತ್ತಿದ್ದಾಗ ನಿನ್ನ ತುಟಿಯಂಚಿನ ನಸುನಗುವನ್ನು ಕಾಣದವಳಲ್ಲ ನಾನು. ಆ ಹುಡುಗಿಯ ಹೆಸರು ತಿಳಿಯಲು ಅದೆಷ್ಟು ಕಾಡಿ ಬೇಡಿದೆ ನಿನ್ನ. "ನಾನಿನ್ನೂ ಅವಳಿಗೆ ಹೇಳಿಲ್ಲ ಕಣೆ. ಅವಳಿಗೆ ನನ್ನ ಪ್ರೇಮ ನಿವೇದನೆ ಮಾಡುವ ಮುಂಚೆ ನಿನಗೆ ಹೇಳಿಯೇ ಹೋಗುವೆ. ಬೇಕಾದರೆ ನಿನ್ನ ಮುಂದೆಯೇ ಅವಳಿಗೆ ಪ್ರಪೋಸ್ ಮಾಡುವೆ, ಹ್ಯಾಪೀ?" ಎಂದಾಗ ನಿನ್ನ ಕಣ್ಣಂಚಿನಿಂದ ಜಾರಿದ ನೀರ ಹನಿ ಅದ್ಯಾವುದೋ ಹೊಸ ಸತ್ಯ ತೆರೆದಿಟ್ಟ೦ತಾಯಿತು. ಅದೇನೋ ಅಭದ್ರತೆ ನಿನ್ನನ್ನು ಕಾಡುವುದು ಖಚಿತವಾಯಿತು. "ಏನಾಯ್ತೋ? ನಾ ನಿನ್ನ ಬೆಸ್ಟ್ ಫ್ರೆಂಡ್ ಅಲ್ವಾ? ಏನಾಯಿತು ಹೇಳು." ಎಂದಾಗ "ಅವಳು ನನ್ನ ರಿಜೆಕ್ಟ್ ಮಾಡಿಬಿಟ್ಟರೆ ನಾ ಖಂಡಿತ ಉಳಿಯಲಾರೆ. ಅವಳು ನನ್ನ ಜೀವ ಕಣೆ". ಕಣ್ಣಿಂದ ಜಾರಿದ ಹನಿಯೊಂದು ನಿನ್ನ ಕೆನ್ನೆ ತೋಯಿಸಿದಾಗ ,"ಅಯ್ಯೋ ಹುಚ್ಚಪ್ಪ, ಅಷ್ಟು ಪ್ರೀತಿಸೋ ನಿನ್ನ ಅವಳ್ಯಾಕೆ ರಿಜೆಕ್ಟ್ ಮಾಡ್ತಾಳೆ? she is lucky to have a guy like you. ಹೇಗೂ ನನ್ನ ಮುಂದೆಯೇ ಪ್ರಪೋಸ್ ಮಾಡ್ತಿಯಲ್ಲ? ನಾ ನಿನಗೆ ಹೆಲ್ಪ್ ಮಾಡ್ತೀನಿ. ಓಕೇ?" ಎಂದು ನಿನಗೆ ಸಮಾಧಾನ ಮಾಡಿ ಕಣ್ಣೊರೆಸುವಷ್ಟರಲ್ಲಿ ನನಗೆ ಸಾಕು ಸಾಕಾಗಿತ್ತು.


ಅಂತೂ ಬಹು ನಿರೀಕ್ಷೆಯ ಆ ದಿನ ಬಂದೇ ಬಿಡ್ತು. ಕ್ಯಾಂಪಸ್ ರೆಕ್ರೂಟ್‌ಮೆಂಟ್ ಅಲ್ಲಿ ಜಾಬ್ ಸಿಕ್ಕ ತಕ್ಷಣ ಅವಳಿಗೆ ಪ್ರಪೋಸ್ ಮಾಡುವ ದಿನ ಬೆಳಿಗ್ಗೆಯೇ ಹೇಳಿದ್ದೆ ನೀನು. ಮಧ್ಯಾಹ್ನಕ್ಕೆ ಮುಂಚೆಯೇ ನನ್ನ ನೋಡಲು ಓಡೋಡಿ ಬಂದ ನಿನ್ನ ಕಂಡು ಹೆದರಿಬಿಟ್ಟಿದ್ದೆ. ಥೇಟ್ ದೇವದಾಸ್ ತರ ಕಾಣುತ್ತಿದ್ದೆ ನೀನು. ಮಾತಾಡಲೂ ತೊದಲುತ್ತಿದ್ದ ನಿನ್ನನ್ನು ಕಂಡು ನಕ್ಕು ಬಿಟ್ಟಿದ್ದೆ ನಾನು. " ನೀ ಹೀಗೆ ಪ್ರಪೋಸ್ ಮಾಡಿದರೆ ಹೆದರಿ ಓಡಿ ಹೋಗಬಹುದು ಅವಳು". ಎಂದೆ. ನೀ ನಗಲಿಲ್ಲ. "ಓಕೇ. ಈಗಲಾದರೂ ಹೇಳು. ಯಾರವಳು?" ಕಣ್ಣ ಹುಬ್ಬು ಮೇಲೇರಿಸಿ ಕೇಳಿದಾಗ "ಇಲ್ಲೇ ಇದ್ದಾಳೆ. ನೋಡಬೇಕಾ?" ಆಚೀಚೆ ನೋಡಿದೆ. ಯಾರೂ ಕಾಣಲಿಲ್ಲ. "ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು. ಅವಳು ಕಾಣಬಹುದು" ಎಂದಾಗ ಅವನ ಕಣ್ಣಲ್ಲಿ ನನ್ನದೇ ಬಿಂಬ ಮಂಜು ಮಂಜಾಗಿ ಕಾಣಿಸಿತು. "ನನ್ನ ಕಣ್ಣಲ್ಲಿ ಮಾತ್ರವಲ್ಲ. ಹೃದಯದಲ್ಲೂ ನಾನು ಪ್ರತಿಷ್ಟಾಪಿಸಿದ್ದು ನಿನ್ನನ್ನು ಮಾತ್ರ".

ಮೈಯಲ್ಲೆಲ್ಲ ಕರೆಂಟ್ ಹೊಡೆಸಿಕೊಂಡಂತೆ ಶಾಕ್ ನನಗೆ. ಅರಗಿಸಿಕೊಳ್ಳಲಾಗಲಿಲ್ಲ ಈ ನಿಜವನ್ನು. ಜೋಕ್ ಮಾಡುತ್ತಿಡ್ದಿಯೇನೋ ಅಂದುಕೊಂಡೆ. ನಿನ್ನ ಮೊಗದಲ್ಲಿದ್ದ ದೈನ್ಯ ಭಾವ ಅದನ್ನು ಅಲ್ಲಗಳೆಯಿತು. ಯಾಕೋ ಏನೋ, ಜೋರಾಗಿ ಅಳಬೇಕೆಂದೆನಿಸಿತು. ನಿನ್ನ ಮುಂದೆ ನಿಲ್ಲಲಾಗಲಿಲ್ಲ. ನೀನು ಮೋಸಗಾರನಂತೆ ಕಂಡೆ ನನಗೆ. ಗೆಳೆತನದ ಹೆಸರಲ್ಲಿ ಪ್ರೀತಿಯ ಮೋಸ.

ಅದಾದ ನಂತರ ನಡೆದದ್ದೆಲ್ಲ ಪವಾಡ. ನಮ್ಮ ಮದುವೆಗೆ ಈಗ ಆಲ್ಮೋಸ್ಟ್ ಮೂರು ವರ್ಷವಾದರೂ ಈಗಲೂ ನೀನು ನನ್ನ ಮುದ್ದು ಅಪ್ಪು. ಗಂಡ ಹೆಂಡತಿಗಿಂತ ಮಿಗಿಲಾದ ಗೆಳೆತನವೆಂಬ ಬಂಧ ಇನ್ನೂ ದೂರಾಗಿಲ್ಲ. ಥ್ಯಾಂಕ್ಸ್ ಕಣೋ. ಹೀಗೇ ಎಂದೆಂದಿಗೂ ನನ್ನ ಜೊತೆಯೇ ಇದ್ದುಬಿಡು. ನನ್ನ ಬೆಸ್ಟ್ ಫ್ರೆಂಡ್ ಆಗಿ ಕೊನೆಯುಸಿರಿನ ತನಕ. 


-ಮೆಹನಾzzz